ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ.ಗೆ ಮಿತಿಗೊಳಿಸಿ ರಾಜ್ಯ ಸರ್ಕಾರದಿಂದ ಕರಡು ಅಧಿಸೂಚನೆ
ಬೆಂಗಳೂರು: ರಾಜ್ಯದ ಮಲ್ಟಿಪ್ಲೆಕ್ಸ್ ಸೇರಿದಂತೆ ಎಲ್ಲ ಚಿತ್ರಮಂದಿರದಲ್ಲಿ ಪ್ರದರ್ಶಿಸುವ ಎಲ್ಲಾ ಭಾಷೆಯ ಚಿತ್ರಗಳಿಗೆ ಪ್ರವೇಶ ದರ 200 ರೂ. ಮಿತಿ ನಿಗದಿಗೊಳಿಸುವ ಸಂಬಂಧ ಕರಡು ತಿದ್ದುಪಡಿ ನಿಯಮ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.
ಕರ್ನಾಟಕ ಸಿನಿನಾ ನಿಯಂತ್ರಣ (ತಿದ್ದುಪಡಿ) ನಿಯಮ 2025 ಕರಡು ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರ ಯಾವುದೇ ಸಾರ್ವಜನಿಕ ಆಕ್ಷೇಪ, ಸಲಹೆ ಸೂಚನೆಗಳಿಗೆ 15 ದಿನಗಳ ಕಾಲಾವಕಾಶ ನೀಡಿದೆ. ಈ ಕರಡು ನಿಯಮದ ಪ್ರಕಾರ ಯಾವುದೇ ಮಲ್ಟಿಪ್ಲೆಕ್ಸ್ ಗಳು, ಚಿತ್ರಮಂದಿರಗಳು ಎಲ್ಲಾ ಭಾಷೆಯ ಸಿನಿಮಾಗಳಿಗೆ 200 ರೂ. ಒಳಗೆ ಟಿಕೆಟ್ ದರ ವಿಧಿಸಬೇಕು. ಈ ಟಿಕೆಟ್ ದರದಲ್ಲೇ ಮನರಂಜನೆ ತೆರಿಗೆಯೂ ಒಳಗೊಂಡಿದೆ.
ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಪ್ರವೇಶ ದರ 200 ರೂ. ನಿಗದಿಗೊಳಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಿಎಂ ಸಿದ್ದರಾಮಯ್ಯಗೆ ಹಲವು ಬಾರಿ ಮನವಿ ಮಾಡಿತ್ತು. ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಸೇರಿದಂತೆ ಚಿತ್ರಮಂದಿರಗಳಲ್ಲಿ ಪ್ರವೇಶ ದರ ದುಬಾರಿಯಾಗಿದ್ದು, ಸಾವಿರದಿಂದ ಒಂದೂವರೆ ಸಾವಿರ ರೂಪಾಯಿವರೆಗೂ ಟಿಕೆಟ್ ದರವನ್ನು ನಿಗದಿಪಡಿಸಲಾಗುತ್ತಿದೆ. ಇದರಿಂದ ಕನ್ನಡ ಪ್ರೇಕ್ಷಕರಿಗೆ ಹೊರೆಯಾಗಿದೆ. ರೂ.200 ಮೀರದಂತೆ ಪ್ರವೇಶದರ ವಿಧಿಸುವಂತೆ ಸಿಎಂಗೆ ಮನವಿ ಸಲ್ಲಿಸಲಾಗಿತ್ತು.
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ವಾಣಿಜ್ಯ ಮಂಡಳಿಯು ಚಿತ್ರೋದ್ಯಮದ ಪರವಾಗಿ ಮನವಿ ಮಾಡಿಕೊಂಡ ಮೇರೆಗೆ ಸರ್ಕಾರ ಗೃಹ ಇಲಾಖೆಯ ಮೂಲಕ ಆದೇಶ ಹೊರಡಿಸಬೇಕಾಗಿದ್ದು, ಅದರ ಬದಲು ವಾರ್ತಾ ಇಲಾಖೆಯ ಮೂಲಕ ಆದೇಶ ಹೊರಡಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಧಿಕಾರ ವ್ಯಾಪ್ತಿಗೆ ಒಳಪಡುವುದಿಲ್ಲವೆಂದು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಹೀಗಾಗಿ ಗೃಹ ಇಲಾಖೆಯಿಂದಲೇ ಆದೇಶ ಹೊರಡಿಸಲು ಮನವಿ ಮಾಡಿದ್ದರು.
ಈ ಸಂಬಂಧ ವಾಣಿಜ್ಯ ಮಂಡಳಿಯ ಮುಂಭಾಗದಲ್ಲಿ ನಿರ್ಮಾಪಕರು, ವಿತರಕರು, ಪ್ರದರ್ಶಕರು ಧರಣಿ ಸತ್ಯಾಗ್ರಹ ನಡೆಸಿದ್ದರು. ದುಬಾರಿ ಪ್ರವೇಶ ದರದಿಂದ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಲು ಪ್ರೇಕ್ಷಕರು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಂಡು ಚಿತ್ರ ನಿರ್ಮಾಣಕ್ಕೆ ಹಾಕಿದ ಬಂಡವಾಳ ವಾಪಸ್ ಪಡೆಯಲು ಕಷ್ಟಸಾಧ್ಯವಾಗುತ್ತಿದೆ. ಹಾಗಾಗಿ ಕೂಡಲೇ 200 ರೂ.ಗೆ ಮೀರದಂತೆ ಪ್ರವೇಶದರ ನಿಗದಿಪಡಿಸಲು ಕೋರಲಾಗಿತ್ತು. ಈಗಾಗಲೇ ನೆರೆರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ ಮತ್ತು ಚೆನ್ನೈ ಮಲ್ಟಿಪ್ಲೆಕ್ಸ್‌ಗಳಲ್ಲಿ 150 ರಿಂದ 200 ರೂ. ಪ್ರವೇಶದರ ನಿಗದಿಪಡಿಸಲಾಗಿದೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯ 2025-26 ಸಾಲಿನ ಬಜೆಟ್ ನಲ್ಲೇ 200 ರೂ. ಟಿಕೆಟ್ ದರ ಮಿತಿಗೊಳಿಸುವುದಾಗಿ ಘೋಷಣೆ ಮಾಡಲಾಗಿತ್ತು. ಇದೀಗ ಗೃಹ ಇಲಾಖೆ ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದೆ. 15 ದಿನಗಳ ಬಳಿಕ ಸಾರ್ವಜನಿಕ ಆಕ್ಷೇಪ, ಸಲಹೆ ಸೂಚನೆ ಪಡೆದು ಅಂತಿಮ ಅಧಿಸೂಚನೆ ಹೊರಡಿಸಲಿದೆ.