ಧಾರವಾಡ: ಹಣಕಾಸಿನ ವಿಚಾರವಾಗಿ ಕಂಠಿಗಲ್ಲಿಯಲ್ಲಿ ಇತ್ತೀಚೆಗೆ ನಡೆದ ಚಾಕು ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ. ರಾಘವೇಂದ್ರ (ರಾಜು) ಗಾಯಕವಾಡ ಮೃತರು.
ಕಳೆದ ಗುರುವಾರ ಧಾರವಾಡದ ಕಂಠಿಗಲ್ಲಿಯಲ್ಲಿ ಚಾಕು ಇರಿತ ನಡೆದಿತ್ತು. ಹಣಕಾಸಿನ ವಿಚಾರವಾಗಿ ಯುವಕ ರಾಜು ಗಾಯಕವಾಡನಿಗೆ ಮಲ್ಲಿಕ್ ಎಂಬಾತ ಚಾಕುವಿನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ರಾಜುನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ರಾಜು ಸಹೋದರ ಮಹಾಂತೇಶ್ ಜೊತೆ ಮಲ್ಲಿಕ್ ಹಣದ ವ್ಯವಹಾರ ಮಾಡಿಕೊಂಡಿದ್ದ. ಕೊಟ್ಟ ಹಣ ಮರಳಿ ಕೇಳಲು ಮಲ್ಲಿಕ್ ತನ್ನ ಸಹಚರರ ಜೊತೆ ಮಹಾಂತೇಶನ ಮನೆಗೆ ಬಂದಿದ್ದ. ಆದರೆ ಮಹಾಂತೇಶ್ ಮನೆಯಲ್ಲಿ ಸಿಗದಿರುವ ಕಾರಣ ಮಲ್ಲಿಕ್ ಹಾಗೂ ರಾಜು ನಡುವೆ ಜಗಳ ನಡೆದಿತ್ತು. ಈ ವೇಳೆ ರಾಜುಗೆ ಮಲ್ಲಿಕ್ ಚಾಕು ಇರಿದು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಾಜುನನ್ನು ತಕ್ಷಣ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದ ಐದಾರು ದಿನಗಳಿಂದ ಚಿಕಿತ್ಸೆ ನಡೆಯುತ್ತಿತ್ತು. ಆದರೆ, ಇದೀಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಘಟನೆ ಬಳಿಕ ಆರೋಪಿ ಮಲ್ಲಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದಾದ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದರು. ನಂತರ ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.