Breaking News

ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಏರಿಕೆ

Spread the love

ಬೆಂಗಳೂರು: ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಆಟೋರಿಕ್ಷಾಗಳ ಪ್ರಯಾಣ ದರ ಏರಿಕೆಗೆ ಕೊನೆಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಸಿರು ನಿಶಾನೆ ತೋರಿಸಿದ್ದಾರೆ. ಕನಿಷ್ಠ ದರವನ್ನು 30 ರೂಪಾಯಿಗಳಿಂದ 36 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಪರಿಷ್ಕ್ರತ ದರದಂತೆ ಮೊದಲ ಎರಡು ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಠ ದರ 36 ರೂಪಾಯಿಗಳಿರಲಿದೆ. ಎರಡು ಕಿಲೋಮೀಟರ್ ನಂತರದ ಪ್ರಯಾಣಕ್ಕೆ ಪ್ರತಿ ಕಿಲೋಮೀಟರ್​​ಗೆ ಈ ಮೊದಲು ಇದ್ದ ದರವನ್ನು 15 ರೂ.ನಿಂದ 18 ರೂ.ಗೆ ಹೆಚ್ಚಳ ಮಾಡಲಾಗಿದೆ. ಅಂದರೆ ಎರಡು ಕಿ.ಮೀ ನಂತರದ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ 3 ರೂಪಾಯಿ ದರ ಏರಿಸಲಾಗಿದೆ.

ಬೆಂಗಳೂರಲ್ಲಿ ಆಟೋ ಪ್ರಯಾಣ ದರ ಏರಿಕೆ Bengaluru auto fare hike

ಆಗಸ್ಟ್ 1 ರಿಂದ ಹೊಸ ದರ: ಆಟೋ ಸಂಘಟನೆಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವಂತೆ ಆಟೋರಿಕ್ಷಾ ಪ್ರಯಾಣ ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಆಗಸ್ಟ್ 1 ರಿಂದ ಪರಿಷ್ಕೃತ ಆಟೋ ಪ್ರಯಾಣ ದರ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಎಷ್ಟು ದರ ಏರಿಕೆ?: ಆಟೋ ಪ್ರಯಾಣ ದರವು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆ ತನಕ ಒಂದೂವರೆ ಪಟ್ಟು ಇರುತ್ತದೆ. ಆಟೋ ಪ್ರಯಾಣದ ಸಂದರ್ಭದಲ್ಲಿ ಮೊದಲ 5 ನಿಮಿಷದ ಕಾಯುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ನಂತರ ಪ್ರತಿ 15 ನಿಮಿಷಕ್ಕೆ 10 ರೂ. ಕಾಯುವಿಕೆ ಶುಲ್ಕ ನಿಗದಿಪಡಿಸಲಾಗಿದೆ. ಹಾಗೆಯೇ ಲಗೇಜಿಗೆ 20 ಕೆಜಿ ತನಕ ಶುಲ್ಕ ಇರುವುದಿಲ್ಲ. 20 ಕೆಜಿಗೂ ಹೆಚ್ಚಿನ ತೂಕದ ಲಗೇಜಿಗೆ 10 ರೂಪಾಯಿ ದರ ವಿಧಿಸಲಾಗುತ್ತದೆ. 50 ಕೆಜಿ ತನಕ ಮಾತ್ರ ಆಟೋದಲ್ಲಿ ಲಗೇಜು ಸಾಗಿಸಲು ಅವಕಾಶ ಇರುತ್ತದೆ.

ಜಿಲ್ಲಾಧಿಕಾರಿಗಳ ಬಳಿ ಆಟೋ ಸಂಘಟನೆಗಳು 2 ಕಿಮೀಗೆ ಕನಿಷ್ಠ ದರವನ್ನು 40 ರೂಪಾಯಿಗಳಿಗೆ ಮತ್ತು 2 ಕಿಮೀ ನಂತರದ ಪ್ರತಿ ಕಿಲೋಮೀಟರ್​ಗೆ 20 ರೂಪಾಯಿಗಳನ್ನು ನಿಗದಿಪಡಿಸುವಂತೆ ಮನವಿ ಮಾಡಿದ್ದವು. ಆದರೆ ಜಿಲ್ಲಾಧಿಕಾರಿಗಳು ಈ ಮನವಿಯನ್ನು ತಳ್ಳಿಹಾಕಿ ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ಕನಿಷ್ಠ ದರವನ್ನು 36 ರೂಪಾಯಿಗೆ ನಿಗದಿಪಡಿಸಿದ್ದಾರೆ.

ಆಟೋರಿಕ್ಷಾ ಸಂಘಟನೆ ಅಸಮಾಧಾನ: ಕನಿಷ್ಠ ದರವನ್ನು 36 ರೂಪಾಯಿಗೆ ಮತ್ತು ಪ್ರತಿ ಕಿಮೀಗೆ 3 ರೂಪಾಯಿ ಹೆಚ್ಚಳ ಮಾಡಿರುವ ಕ್ರಮ ಸರಿ ಇಲ್ಲ ಎಂದು ಆದರ್ಶ ಆಟೋ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಂದೀಪ್ ಅವರು ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ.

ದರ ಏರಿಕೆಯಿಂದ ಚಿಲ್ಲರೆ ಸಮಸ್ಯೆ ಎದುರಾಗುತ್ತದೆ. ಇದರಿಂದ ಆಟೋ ಚಾಲಕರು ಮತ್ತು ಗ್ರಾಹಕರ ನಡುವೆ ಅನಗತ್ಯ ಜಗಳಕ್ಕೆ ಕಾರಣವಾಗುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕನಿಷ್ಠ ದರ 40 ರೂ ಹಾಗೂ 2 ಕಿಮಿ ನಂತರದ ಪ್ರಯಾಣಕ್ಕೆ 20 ರೂಪಾಯಿ ನಿಗದಿ ಮಾಡಿದ್ದರೆ ಚಿಲ್ಲರೆ ಸಮಸ್ಯೆ ಉಂಟಾಗುತ್ತಿರಲಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಹಲವಾರು ಆಟೋಗಳಲ್ಲಿ ಅನಧಿಕೃತವಾಗಿ ಈಗಾಗಲೇ 40 ರೂ. ಕನಿಷ್ಠ ಆಟೋ ಪ್ರಯಾಣ ದರ ಪಡೆಯಲಾಗುತ್ತದೆ. ಇದನ್ನೇ ಅಧಿಕೃತಗೊಳಿಸಿದ್ದರೆ ಉತ್ತಮವಾಗಿರುತ್ತಿತ್ತು. ಯಾರಿಗೂ ತೊಂದರೆಯಾಗುತ್ತಿರಲಿಲ್ಲ. ಇನ್ನು ಕೆಲವು ಆಟೋ ಸಂಘಟನೆಗಳು ಕನಿಷ್ಠ ದರವನ್ನು 50 ರೂಗೆ ಏರಿಕೆ ಮಾಡುವಂತೆ ಮನವಿ ಮಾಡಿದ್ದವು. ನಾವು ಕನಿಷ್ಠ ದರವನ್ನು 40 ರೂಗೆ ಮಾತ್ರ ಒತ್ತಾಯಿಸಿದ್ದೆವು ಎಂದು ಆದರ್ಶ ಸಂಘಟನೆಯ ಸಂಪತ್ ಹೇಳಿದ್ದಾರೆ.

ಆಟೋ ಪ್ರಯಾಣ ದರವನ್ನು ಈ ಹಿಂದೆ 2021 ರ ಡಿಸೆಂಬರ್​ನಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಮೂರೂವರೆ ವರ್ಷಗಳ ಬಳಿಕ ಈಗ ಮತ್ತೆ ದರ ಏರಿಕೆ ಮಾಡಲಾಗಿದೆ. ಆಟೋ ಗ್ಯಾಸ್ ಬೆಲೆ ಏರಿಕೆ, ಇಂಧನ ದರ ಹೆಚ್ಚಳ, ದಿನನಿತ್ಯದ ಬೆಲೆ ಏರಿಕೆ ಗಮನದಲ್ಲಿಟ್ಟುಕೊಂಡು ಕನಿಷ್ಠ ದರ 40 ರೂಪಾಯಿಗೆ ನಿಗದಿ ಮಾಡಲು ಆಟೋ ಸಂಘಟನೆಗಳು ಹೆಚ್ಚಿನ ಒತ್ತಡವನ್ನು ಜಿಲ್ಲಾಧಿಕಾರಿಗಳ ಮೇಲೆ ಹಾಕಿದ್ದರು.


Spread the love

About Laxminews 24x7

Check Also

ಶಾಸಕರ ಜೊತೆಗಿನ ಒನ್ ಟು ಒನ್ ಸಭೆ ಬಳಿಕ ಇದೀಗ ಸುರ್ಜೇವಾಲರಿಂದ ಮಿನಿಸ್ಟರ್​​​ ಜೊತೆ One to One ಸಭೆ

Spread the love ಬೆಂಗಳೂರು: ಶಾಸಕರೊಟ್ಟಿಗಿನ ಒನ್ ಟು ಒನ್ ಸಭೆ ಬಳಿಕ ಇದೀಗ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಸಚಿವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ