ಬೆಂಗಳೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ನಕಲಿ ಶೂರಿಟಿ ನೀಡುತ್ತಿದ್ದ 8 ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಫಿ, ಪ್ರವೀಣ್ ಕುಮಾರ್, ಅಭಿಷೇಕ್, ಗೋವಿಂದ ನಾಯ್ಕ್ ಮತ್ತು ದೊರೆರಾಜು ಹಾಗೂ ಮತ್ತೊಂದು ಪ್ರಕರಣದಲ್ಲಿ ಅಬೀದ್, ವಾಸಿಂ ಅಹಮ್ಮದ್ ಮತ್ತು ಗೋವಿಂದರಾಜು ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಜಾಮೀನು ಪಡೆಯಲು ನಕಲಿ ಶೂರಿಟಿಗಳನ್ನು ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭೂಮಿ ಆ್ಯಪ್ನ ಮೂಲಕ ಬೇರೆ ಬೇರೆಯವರ ಪಹಣಿಯ ವಿವರ ಪಡೆದುಕೊಳ್ಳುತ್ತಿದ್ದ ಇವರು, ಅದರಲ್ಲಿನ ವಿಳಾಸಕ್ಕೆ ಹೊಂದಿಕೆಯಾಗುವಂತೆ ನಕಲಿ ಆಧಾರ್ ಕಾರ್ಡ್ ಮಾದರಿ ಸೃಷ್ಟಿಸುತ್ತಿದ್ದರು. ಆ ಆಧಾರ್ಗೆ ಯಾವುದೋ ಒಂದು ನಂಬರ್ ನಮೂದಿಸಿ, ಶೂರಿಟಿ ನೀಡಲು ಹೋಗುವವರ ಫೋಟೋ ಸೇರಿಸುತ್ತಿದ್ದರು.
ಅದರೊಂದಿಗೆ ಶೂರಿಟಿ ನೀಡುವ ವ್ಯಕ್ತಿ ಬ್ಯಾಂಕ್ ಪಾಸ್ಬುಕ್ ಜೊತೆ ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ಪಡೆಯಲು ನೆರವಾಗುತ್ತಿದ್ದ. ಪ್ರಕರಣವೊಂದರಲ್ಲಿ ನ್ಯಾಯಾಲಯದ ಕಲಾಪ ಪ್ರಕ್ರಿಯೆ ನಡೆಯುವಾಗ ಆರೋಪಿಗಳ ವಂಚನೆ ಬಯಲಾಗಿತ್ತು. ಕೂಡಲೇ 4ನೇ ಎಸಿಜೆಎಂ ನ್ಯಾಯಾಲಯದ ಶಿರಸ್ತೇದಾರರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಟ್ಟು 8 ಜನ ಆರೋಪಿಗಳನ್ನು ಬಂಧಿಸಿದ್ದು, 47 ಆಧಾರ್ ಕಾರ್ಡ್ಸ್, 122 ದಾಖಲಾತಿಗಳು, 7 ಮೊಬೈಲ್ ಫೋನ್ಗಳು, 1 ಪೆನ್ ಡ್ರೈವ್, ನಕಲಿ ಸೀಲ್ ವಶಕ್ಕೆ ಪಡೆದಿದ್ದಾರೆ.
Laxmi News 24×7