ಉರಿಯದ ಬೀದಿ ದೀಪಗಳು… ಕತ್ತಲಲ್ಲಿ ಮುಳುಗಿದ ಖಾನಾಪೂರ!!!
ಖಾನಾಪೂರ – ನಂದಗಡ ಹಾಗೂ ಖಾನಾಪೂರ – ಬೆಳಗಾವಿ ರಸ್ತೆಗಳ ಖಾನಾಪೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಭಾಗಗಳಲ್ಲಿ ರಸ್ತೆ ಮಧ್ಯದಲ್ಲಿರುವ ಬೀದಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಇದರ ಪರಿಣಾಮವಾಗಿ ಆ ಪ್ರದೇಶ ಸಂಪೂರ್ಣವಾಗಿ ಕತ್ತಲೆಯಲ್ಲಿ ಮುಳುಗಿದೆ.
ದಟ್ಟ ಅಂಧಕಾರದ ಹಿನ್ನೆಲೆ ಪ್ರವಾಸಿಗರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ರಸ್ತೆಯಲ್ಲಿ ಸಂಚರಿಸಲು ಸಂಕಷ್ಟ ಎದುರಾಗುತ್ತಿದೆ. ಮೊದಲೇ ರಸ್ತೆಯು ತೆಗ್ಗುಮಯವಾಗಿದ್ದು, ಇದರ ಜೊತೆಗೆ ಬೆಳಕಿನ ಕೊರತೆ ಇರುವುದರಿಂದ ಆಪತ್ತುಂಟು ಮಾಡುತ್ತಿದೆ.
ಮಾಜಿ ಶಾಸಕಿ ಹಾಗೂ ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ನಿಂಬಾಳ್ಕರ್ ಅವರ ನೇತೃತ್ವದಲ್ಲಿ ಖಾನಾಪೂರ ಪಟ್ಟಣದ ಸೌಂದರ್ಯವರ್ಧನೆಗೆ ಯೋಜನೆ ರೂಪಿಸಲಾಗಿದ್ದು, ಎರಡು ಪ್ರಮುಖ ರಸ್ತೆಗಳ ನಡುವೆ ದೀಪಗಳನ್ನು ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಇದೀಗ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯದ ಧೋರಣೆಯಿಂದಾಗಿ ಬೀದಿ ದೀಪಗಳು ವಿದ್ಯುತ್ ಸಂಪರ್ಕ ಕಡಿತಗೊಂಡು, ಇಡೀ ಪರಿಸರ ಕತ್ತಲುಮಯವಾಗಿದೆ.
ಕೆಲವೊಂದು ದೀಪಗಳಲ್ಲಿ ಮಾತ್ರ ಬೆಳಕು ಕಾಣಿಸುತ್ತಿದ್ದು, ಉಳಿದ ಭಾಗಗಳಲ್ಲಿ ಸಂಪೂರ್ಣ ಅಂಧಕಾರವಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ತಕ್ಷಣ ಗಮನ ಹರಿಸಿ, ಬೀದಿ ದೀಪಗಳನ್ನು ಅಳವಡಿಸಿ, ತೆಗ್ಗು ಮುಚ್ಚುವ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
Laxmi News 24×7