ಶಿವಮೊಗ್ಗ: ದೇಶದ ಅತಿ ಉದ್ದದ ಎರಡನೇ ಕೇಬಲ್ ಸೇತುವೆ ಶರಾವತಿ ಹಿನ್ನೀರಿನಲ್ಲಿ ನಿರ್ಮಾಣವಾಗಿರುವ ಸೇತುವೆಯನ್ನು ಇಂದು (ಜು.14) ಕೇಂದ್ರದ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಲೋಕಾರ್ಪಣೆ ಮಾಡಲಿದ್ದಾರೆ.
ಬಹುನಿರೀಕ್ಷಿತ ಈ ಸೇತುವೆಯು ಶರಾವತಿ ದ್ವೀಪದ ಜನರ ದಶಕಗಳ ಬೇಡಿಕೆಯಾಗಿತ್ತು. 2010ರಲ್ಲಿ ಪ್ರಾರಂಭವಾದ ಸೇತುವೆಯು 2025ರಲ್ಲಿ ಮುಕ್ತಾಯವಾಗಿದೆ. ಸೇತುವೆಗೆ ಸುಮಾರು 423.15 ಕೋಟಿ ರೂ. ವೆಚ್ಚ ಮಾಡಲಾಗಿದೆ. ಸೇತುವೆ ನಿರ್ಮಾಣಕ್ಕಾಗಿ ಸಾಗರ ಪಟ್ಟಣದಿಂದ ಹೊಸನಗರ ತಾಲೂಕಿನ ಮರಕುಟುಕದ ತನಕ ಗ್ರಾಮೀಣ ಭಾಗದ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ಡರ್ಜೆಗೆ ಏರಿಸಿ ಮೊದಲ ಹಂತದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ.
ಸೇತುವೆ ನಿರ್ಮಾಣದ ನಂತರ ಸಾಗರದಿಂದ ಅಂಬರಗೊಡ್ಲು ತನಕ ಹಾಗೂ ಹೊಳೆಬಾಗಿಲಿನಿಂದ ಮರಕುಟಕ ತನಕದ ರಸ್ತೆಯನ್ನು ಅಗಲೀಕರಣದ ಜೊತೆಗೆ ನೇರವಾದ ರಸ್ತೆಯನ್ನು ಮಾಡಲಿದ್ದಾರೆ. ಇಂದು ಬೆಳಗ್ಗೆ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ನಾಗಪುರದಿಂದ ವಿಶೇಷ ವಿಮಾನದಿಂದ ಹೊರಟ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ನಲ್ಲಿ ಸಿಗಂದೂರು ಬಳಿಯಲ್ಲಿ ನಿರ್ಮಾಣ ತಾತ್ಕಾಲಿಕ ಹೆಲಿಪ್ಯಾಡ್ನಲ್ಲಿ ಇಳಿದು ಸಿಗಂದೂರು ದೇವಾಲಯಕ್ಕೆ ತೆರಳಿ ದೇವಿಯ ದರ್ಶನ ಪಡೆದು, ಸೇತುವೆ ಉದ್ಘಾಟನೆ ಮಾಡಲಿದ್ದಾರೆ. ಇಲ್ಲಿಂದ ಹೆಲಿಕಾಪ್ಟರ್ನಲ್ಲಿ ಸಾಗರದ ಮಂಕಳಲೆ ಹೆಲಿಪ್ಯಾಡ್ ಗೆ ಬಂದು ಸಾಗರದ ನೆಹರು ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
Laxmi News 24×7