Breaking News

ಕೈದಿಯ ಹೊಟ್ಟೆಯಲ್ಲಿತ್ತು ಕೀಪ್ಯಾಡ್​ ಫೋನ್! ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ಮೆಗ್ಗಾನ್ ಆಸ್ಪತ್ರೆ ವೈದ್ಯರು

Spread the love

ಶಿವಮೊಗ್ಗ: ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಯೊಬ್ಬನ ಹೊಟ್ಟೆಯಲ್ಲಿದ್ದ ಕೀಪ್ಯಾಡ್ ಮೊಬೈಲ್​ ಅನ್ನು ಮೆಗ್ಗಾನ್ ಬೋಧನಾ ಆಸ್ಪತ್ರೆಯ ಮೂವರು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ. ದೌಲತ್ ಎಂಬ ಕೈದಿಯ ಹೊಟ್ಟೆಯಿಂದ ಫೋನ್ ಹೊರತೆಗೆಯಲಾಗಿದೆ.

ಕಾರಾಗೃಹದ ಸಜಾ ಬಂಧಿಯಾಗಿದ್ದ ದೌಲತ್ ಅಲಿಯಾಸ್ ಗುಂಡ (34) ಹೊಟ್ಟೆ ನೋವೆಂದು ಜೂನ್ 23ರಂದು ಕಾರಾಗೃಹದ ವೈದ್ಯರ ಬಳಿ ತಪಾಸಣೆಗೆ ಬಂದಿದ್ದ. ಆಗ ವೈದ್ಯರು ಏನು ತಿಂದಿದ್ದೀರಾ ಎಂದು ಕೇಳಿದಾಗ, ಕೈದಿ ಕಲ್ಲು ನುಂಗಿರುವುದಾಗಿ ಸುಳ್ಳು ಹೇಳಿದ್ದ. ನಂತರ ವಿಪರೀತ ಹೊಟ್ಟೆ ನೋವೆಂದಾಗ ಜೂನ್ 24ರಂದು ದೌಲತ್​ನನ್ನು ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ಕರೆದೊಯ್ದು ಅಲ್ಟ್ರಾಸೌಂಡ್​ ನಡೆಸಿದ್ದು, ಹೊಟ್ಟೆಯಲ್ಲಿ ವಸ್ತು ಇರುವುದು ಪತ್ತೆಯಾಗಿತ್ತು.

ಈ ವಿಷಯವನ್ನು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ತಿಳಿಸಿದಾಗ, ಅವರು ಆಪರೇಷನ್ ನಡೆಸಲು ಸೂಚಿಸಿದ್ದಾರೆ‌. ಅದರಂತೆ ಆಸ್ಪತ್ರೆಯ ಮೂವರು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಬೇಸಿಕ್​ ಕೀಪ್ಯಾಡ್​ ಫೋನ್​ ಅನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸರಿಯಾದ ಸಮಯಕ್ಕೆ ಮೊಬೈಲ್ ಹೊರ ತೆಗೆದ ಕಾರಣ ಕೈದಿಯ ಜೀವ‌ ಉಳಿದಿದೆ.

ಗಾಂಜಾ ಕೇಸ್​ನಲ್ಲಿ ದೌಲತ್​ಗೆ 10 ವರ್ಷ ಜೈಲು ಶಿಕ್ಷೆ: 2021ರಲ್ಲಿ ತುಂಗಾ ನಗರ ಪೊಲೀಸರು ಗಾಂಜಾ ಮಾರಾಟ ಜಾಲವನ್ನು ಭೇದಿಸಿದ್ದರು. ಈ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿ ದೌಲತ್​ಗೆ ಶಿವಮೊಗ್ಗ ಕೋರ್ಟ್ 2024ರಂದು 10 ವರ್ಷ ಶಿಕ್ಷೆ ವಿಧಿಸಿತ್ತು. ಹೀಗಾಗಿ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿದ್ದ.

ದೌಲತ್ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಕೇಂದ್ರ‌ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ್ ಅವರು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ.ಡಿ.ತಿಮ್ಮಪ್ಪ ಮಾತನಾಡಿ, “ಕೇಂದ್ರ‌ ಕಾರಾಗೃಹದಿಂದ ಹೊಟ್ಟೆ ನೋವೆಂದು 30 ವರ್ಷದ ಕೈದಿಯನ್ನು ಜೂನ್ 24ರಂದು ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರು ಅಲ್ಟ್ರಾಸೌಂಡ್ ನಡೆಸಿದಾಗ ಹೊಟ್ಟೆಯಲ್ಲಿ ವಸ್ತು ಇರುವುದು ಗೊತ್ತಾಗಿದೆ. ಜೂನ್ 27ರಂದು ವೈದ್ಯರಾದ ಡಾ.ಧನಂಜಯ್, ಡಾ.ಚಂದನ್ ಮತ್ತು ಡಾ.ರಕ್ಷಿತ್ ಶಸ್ತ್ರಚಿಕಿತ್ಸೆ ನಡೆಸಿ ಬೇಸಿಕ್​ ಕೀಪ್ಯಾಡ್​ ಫೋನ್​ ಹೊರತೆಗೆದಿದ್ದಾರೆ. ನಂತರ ಆತನನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಿ ಜುಲೈ 8ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿದ್ದಾರೆ” ಎಂದು ತಿಳಿಸಿದರು.

ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಕುರಿತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್ ಕುಮಾರ್​ ಪ್ರತಿಕ್ರಿಯಿಸಿ, “ಮೊಬೈಲ್​ ಪತ್ತೆಯಾದ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸಜಾ ಬಂಧಿಯಾಗಿರುವ ದೌಲತ್ ಅಲಿಯಾಸ್ ಗುಂಡ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ನಡೆಸಿದಾಗ ಆತನ ಹೊಟ್ಟೆಯಲ್ಲಿ ಮೊಬೈಲ್ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸುತ್ತಿದ್ದೇವೆ” ಎಂದರು.‌


Spread the love

About Laxminews 24x7

Check Also

ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್​ ಪರಿಸ್ಥಿತಿ ಹೇಗಿರಲಿದೆ ಎಂದು ಕಾದು ನೋಡಿ: ವಿಜಯೇಂದ್ರ

Spread the love ಶಿವಮೊಗ್ಗ: ಲೋಕಸಭೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದ ಬಳಿಕ ಕಾಂಗ್ರೆಸ್ ಪಕ್ಷದವರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಕಾದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ