ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಮೂಹಿಕ ರಜೆ ಪಡೆಯುವ ಮೂಲಕ ಬಿಬಿಎಂಪಿ ಸೇರಿದಂತೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ನಡೆಸುತ್ತಿದ್ದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.
ಬೇಡಿಕೆಗಳ ಕುರಿತು ಜುಲೈ 12ರಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಸೋಮವಾರ ಹಾಗೂ ಮಂಗಳವಾರ ಎಂದಿನಂತೆ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎ.ಅಮೃತರಾಜ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಜುಲೈ 15ರಂದು ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಆದ್ದರಿಂದ, ಮುಷ್ಕರನಿರತ ನೌಕರರಿಗೆ ಸೋಮವಾರ ಹಾಗೂ ಮಂಗಳವಾರ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೇಡಿಕೆಗಳೇನು?
- ಬಿಬಿಎಂಪಿಯಲ್ಲಿ ಖಾಲಿಯಿರುವ 6 ಸಾವಿರಕ್ಕೂ ಹೆಚ್ಚು ವಿವಿಧ ವೃಂದದ ಅಧಿಕಾರಿ/ನೌಕರರ ಹುದ್ದೆಗಳನ್ನು ಭರ್ತಿ ಮಾಡಿ ನೌಕರರ ಮೇಲಿನ ಒತ್ತಡ ಕಡಿಮೆ ಮಾಡಬೇಕು.
- ಪಾಲಿಕೆ ಸಿಬ್ಬಂದಿಯ ಕೆಲಸ ‘ನಾನ್ ಎಕ್ಸಿಕ್ಯೂಟಿವ್’ ಆಗಿದ್ದು, ‘ಲಾಗ್‌ಸೇಫ್’ ಪದ್ಧತಿಯ ಹಾಜರಾತಿಯನ್ನು ಕೈಬಿಡಬೇಕು.
- ಶಿಕ್ಷಣ ವಿಭಾಗದಲ್ಲಿ ಪ್ರಾಂಶುಪಾಲರು ಮುಖ್ಯ ಶಿಕ್ಷಕರ ಮೇಲಿನ ಇಲಾಖಾ ವಿಚಾರಣೆ ಕೈ ಬಿಡಬೇಕು.
- ಸಹಾಯಕ ಕಾರ್ಯಪಾಲಕ, ಕಾರ್ಯಪಾಲಕ ಇಂಜಿನಿಯರ್‌ಗಳಿಗೆ ಮುಂಬಡ್ತಿ ನೀಡಬೇಕು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಮಹಾನಗರ ಪಾಲಿಕೆಗಳ ನೌಕರರು ಸಾಮೂಹಿಕ ರಜೆ ಪಡೆದು ಪ್ರತಿಭಟನೆ ನಡೆಸಿದ್ದರು. ಇದರಿಂದಾಗಿ ಪಾಲಿಕೆ ಕಚೇರಿಯ ಕೆಲಸಗಳು ಬಹುತೇಕ ಸ್ಥಗಿತಗೊಂಡಿದ್ದವು. ತೆರಿಗೆ ಪಾವತಿ, ಜನನ ಪ್ರಮಾಣ ಪತ್ರ ಸೇರಿದಂತೆ ಹಲವು ಕೆಲಸಗಳಿಗಾಗಿ ಪಾಲಿಕೆ ಕಚೇರಿಗೆ ಬಂದ ನಾಗರಿಕರು ಕೆಲಸವಾಗದೆ ಹಿಂದಿರುಗುವಂತಾಗಿತ್ತು