ಮೈಸೂರು: ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸಂಸ್ಥಾಪಕರಾದ ಹಿರಿಯ ಪತ್ರಿಕೋದ್ಯಮಿ ಕೆ.ಬಿ. ಗಣಪತಿ (85) ಅವರು ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಭಾನುವಾರ ಹೃದಯಾಘಾತದಿಂದ ನಿಧನರಾದರು.
ಕಳೆದ 50 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಕೆ.ಬಿ. ಗಣಪತಿ ಅವರು ಮೂಲತಃ ಕೊಡಗಿನವರು. ತಮ್ಮದೇ ಅಂಕಣದ ಮೂಲಕ ಗಮನ ಸೆಳೆದಿದ್ದ ಗಣಪತಿ ಅವರು ಸದಾ ಸುದ್ದಿ ಮನೆಯಲ್ಲಿ ಕ್ರೀಯಾಶೀಲರಾಗಿದ್ದವರು. ಮುಂಬೈನ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿದ ಕೆ.ಬಿ.ಗಣಪತಿ ಅವರು, ಮೈಸೂರಿಗೆ ಬಂದು ಇಂಗ್ಲಿಷ್ನಲ್ಲಿ ಸ್ಟಾರ್ ಆಫ್ ಮೈಸೂರು ಹಾಗೂ ಕನ್ನಡದಲ್ಲಿ ಮೈಸೂರು ಮಿತ್ರ ಪತ್ರಿಕೆಗಳನ್ನು ಪ್ರಾರಂಭಿಸಿದ್ದರು.
ಮೃತರು, ಪತ್ನಿ, ಇಬ್ಬರು ಪುತ್ರ, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ಮಧ್ಯಾಹ್ನ ಕೊಡವರ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೆಯುಡಬ್ಲ್ಯೂಜೆ ಸಂತಾಪ: ಹಿರಿಯ ಪತ್ರಕರ್ತರಾದ ಕೆ.ಬಿ.ಗಣಪತಿ ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ. ಘನತೆಯಿಂದ ಪತ್ರಿಕೋದ್ಯಮ ನಡೆಸಿದ ಗಣಪತಿ ಅವರ ನಿಧನದಿಂದ ಸುದ್ದಿಮನೆಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿ ವ್ಯಕ್ತಪಡಿಸಿದ್ದಾರೆ. ಗಣಪತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
Laxmi News 24×7