ಬೆಳಗಾವಿ(ಡಿಸೆಂಬರ್. 21): ಅತ್ಯಂತ ಪ್ರತಿಷ್ಠ ಚುನಾವಣೆ ಆಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇದೀಗ ಎಲ್ಲಾ ರೀತಿಯ ಸಿದ್ದತೆ ನಡೆದಿದೆ. ಬೆಳಗಾವಿ ಜಿಲ್ಲೆಯ 7 ತಾಲೂಕಿನಲ್ಲಿ ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಇಂದು ಮತ ಪೆಟ್ಟೆಗೆ ಸಮೇತ ಅಧಿಕಾರಿಗಳ ಮತದಾನ ಕೇಂದ್ರಕ್ಕೆ ತೆರಳಿದರು. ಕೊರೋನಾ ವೈರಸ್ ಭೀತಿಯ ನಡುವೆ ಪ್ರತಿಷ್ಠಿತ ಲೋಕಲ್ ಫೈಟ್ ನಡೆಯಲಿದ್ದು, ಗ್ರಾಮೀಣ ಪ್ರದೇಶ ಮತದಾರರು ನಾಳೆ ತಮ್ಮ ಹಚ್ಚು ಚಲಾವಣೆ ಮಾಡಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 259 ಗ್ರಾಮ ಪಂಚಾಯಿತಿಗಳ 3808 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 437 ಸ್ಥಾನಗಳಿಗೆ ವಿರೋಧ ಆಯ್ಕೆ ನಡೆದಿದ್ದು, 14 ಸ್ಥಾನಗಳಿಗೆ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿಲ್ಲ. ಒಟ್ಟು 11256 ಅಭ್ಯರ್ಥಿಗಳ ಭವಿಷ್ಯ ನಾಳೆ ಮತ ಪಟ್ಟಿಗೆ ಸೇರಲಿದೆ. ಚುನಾವಣೆಗಾಗಿ 1894 ಮತಗಟ್ಟೆ ಕೇಂದ್ರವನ್ನು ಗುರುತಿಸಲಾಗಿದೆ. ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ಸಹ ನಡೆಸಲಾಗಿದೆ.
ಬೆಳಗಾವಿ, ಖಾನಾಪುರ, ಬೈಲಹೊಂಗಲ, ಹುಕ್ಕೇರಿ, ಕಿತ್ತೂರು, ಗೋಕಾಕ್ ಹಾಗೂ ಮೂಡಲಗಿ ತಾಲೂಕಿನಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. ಚುನಾವಣೆಗಾಗಿ 26 ಸಾವಿರ ಸಿಬ್ಬಂಧಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿಯೊಂದು ಬೂತ್ ನಲ್ಲಿ 4 ಜನ ಸಿಬ್ಬಂದಿ ಕೆಲಸ ನಿರ್ವಹಣೆ ಮಾಡಲಿದ್ದಾರೆ. ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ, ಕೊರೋನಾ ಸೋಂಕಿತ ಸಕ್ರಿಯ ಪ್ರಕರಣ ಸಂಖ್ಯೆ ತೀವ್ರ ಕಡಿಮೆ ಇದೆ. ಹೀಗಾಗಿ ಜನ ಭಯವನ್ನು ಬಿಟ್ಟು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾನಕ್ಕಾಗಿ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬುರಗಿ ಸಹ ಲೋಕಲ್ ಫೈಟ್ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತೆ ತೀವ್ರ ಭದ್ರತೆ ಕೈಗೊಂಡಿದ್ದಾರೆ. 264 ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಮದ್ಯಪಾನ ಮಾರಾಟ ನಿಷೇಧಿಸಲಾಗಿದೆ.ಜಿಲ್ಲೆಯಲ್ಲಿ 513 ರೌಡಿಗಳ ಮೇಳೆ ಮುಂಜಾಗ್ರತೆ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಚುನಾವಣೆ ಅಕ್ರಮ ತಡೆಯುವ ನಿಟ್ಟಿನಲ್ಲಿ 28 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.