ಚಿಕ್ಕಬಳ್ಳಾಪುರ: ಮದುವೆಯಾಗಲು ನಿರಾಕರಿಸಿದ ಯುವತಿಯ ಮನೆ ಮುಂದೆ ಹೈಡ್ರಾಮ ಮಾಡಿರುವ ಯುವಕನೋರ್ವ ಯುವತಿ ಮೇಲೆ ಆ್ಯಸಿಡ್ ಎರಚಿದ್ದಾನೆ. ಬಳಿಕ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಆತನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕ ಆನಂದ್ ಕುಮಾರ್ ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದಾನೆ. ಆ್ಯಸಿಡ್ ದಾಳಿಗೆ ತುತ್ತಾದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಆನಂದ್ ಕುಮಾರ್ ಶಿಡ್ಲಘಟ್ಟ ತಾಲೂಕಿನ ಬಾಶೆಟ್ಟಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಚಿಂತಾಮಣಿ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ. ತನ್ನ ಅತ್ತೆಯ ಮಗಳನ್ನು ಪ್ರೀತಿಸುವಂತೆ, ಮದುವೆ ಮಾಡಿಕೊಡುವಂತೆ ಕಾಡುತ್ತಿದ್ದನಂತೆ. ಆತನ ಕಾಟಕ್ಕೆ ಬೇಸತ್ತ ಯುವತಿಯ ಪೋಷಕರು ತಮ್ಮ ಸಂಬಂಧಿಕರಾದ ಮಂಚನಬಲೆ ಗ್ರಾಮದಲ್ಲಿ ಮಗಳನ್ನು ಬಿಟ್ಟಿದ್ದರು. ಆಕೆ ಅಲ್ಲಿಯೇ ಇದ್ದುಕೊಂಡು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಕಳೆದ ಮೂರು ದಿನಗಳ ಹಿಂದೆ ಮಂಚನಬಲೆ ಗ್ರಾಮಕ್ಕೆ ಹೋಗಿದ್ದ ಅರುಣ್ ಕುಮಾರ್ ಯುವತಿಯನ್ನು ಕಳುಹಿಸುವಂತೆ ಕೇಳಿದ್ದಾನಂತೆ. ಆದರೆ ಅವರು ಕಳಿಸಿಕೊಟ್ಟಿರಲಿಲ್ಲ. ಇಂದು ಮಧ್ಯಾಹ್ನ ಬಲವಂತವಾಗಿ ಆಕೆಯನ್ನು ಮನೆಯಿಂದ ಕರೆದುಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ ಕರೆದುಕೊಂಡು ಹೋಗಲು ಯುವತಿಯ ಸಂಬಂಧಿಕರು ಅವಕಾಶ ಕೊಟ್ಟಿಲ್ಲ.
ಇದರಿಂದ ಕೋಪಗೊಂಡು ಮನೆಯಲ್ಲಿ ಮಲಗಿದ್ದ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಆ ನಂತರ ತನ್ನ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.