ಗಂಗಾವತಿ: ರಾಮಾಯಣದಂತ ಪೌರಾಣಿಕ ಹಿನ್ನೆಲೆ, ವಿಜಯನಗರದ ಐತಿಹಾಸಿಕ ಹಿನ್ನೆಲೆಯ ನಂಟು ಹೊಂದಿರುವ ಗಂಗಾವತಿಯಂಥ ಕ್ಷೇತ್ರಕ್ಕೆ ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಾದ ನೀವು ಕಳಂಕ ಉಂಟು ಮಾಡಲು ಯತ್ನಿಸುತ್ತಿದ್ದೀರಿ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಅಧಿಕಾರಿಗಳನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಮಂಥನ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಕಳಂಕ ಬರುತ್ತಿದೆ ಎಂದು ಆರೋಪಿಸಿದ್ದು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇತ್ತೀಚೆಗೆ ಕೊಪ್ಪಳ ತಾಲೂಕಿನ ಬಸಾಪುರದ ರೆಸಾರ್ಟ್ಗಳಲ್ಲಿ ನಡೆದ ಅಕ್ರಮ ಗಾಂಜಾ ಮಾರಾಟ ಮತ್ತು ಸಾಗಾಣಿಕೆ ಪ್ರಕರಣವನ್ನು ರಾಜಕೀಯ ಒತ್ತಡಕ್ಕೆ ಒಳಗಾಗಿ ಪೊಲೀಸರು, ಗಂಗಾವತಿಗೆ ವರ್ಗಾಯಿಸಿಕೊಂಡು ತಾಲೂಕಿಗೆ ಕಳಂಕ ತರಲು ಯತ್ನಿಸಿದ್ದೀರಿ ಎಂದು ದೂರಿದ ಜನಾರ್ದನ ರೆಡ್ಡಿ, ಕೊಪ್ಪಳದ ಬಸಾಪುರ ರೆಸಾರ್ಟ್ನಲ್ಲಿ ನಡೆದ ಪ್ರಕರಣ ಗಂಗಾವತಿಗೆ ನಿಯಮಬಾಹಿರವಾಗಿ ವರ್ಗಾಯಿಸಿ ಪೊಲೀಸರು ದೂರು ದಾಖಲಿಸಿಕೊಂಡಿರುವುದು ಸರಿಯಲ್ಲ ಎಂದು ಹೇಳಿದರು.
ಒತ್ತಡಕ್ಕೆ ಒಳಗಾಗಿ ಕಳಂಕವನ್ನುಂಟು ಮಾಡುತ್ತೀರಾ?: ಕೇವಲ ಸ್ಥಳೀಯ ಮಾತ್ರವಲ್ಲ, ರಾಷ್ಟ್ರೀಯ ಮಾಧ್ಯಮಗಳನ್ನು ಇಲ್ಲಿಗೆ ಕರೆಯಿಸಿ ನಿಮ್ಮ ಬಂಡವಾಳ ಬಯಲು ಮಾಡುತ್ತೇನೆ. ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ, ಆನೆಗೊಂದಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ನೀವು ರಾಜಕೀಯ ಒತ್ತಡಕ್ಕೆ ಒಳಗಾಗಿ ಗಂಗಾವತಿ ಕ್ಷೇತ್ರಕ್ಕೆ ಕಳಂಕ ಉಂಟು ಮಾಡುತ್ತೀರಾ? ಎಂದು ಪ್ರಶ್ನಿಸಿದರು.
Laxmi News 24×7