ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾಗಿದ್ದ ಧಾರವಾಡದ ಎಎಸ್‌ಪಿ ನಾರಾಯಣ.ವಿ.ಭರಮನಿ ರಾಜೀನಾಮೆಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ವೇದಿಕೆ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗೆ ಕೈ ಎತ್ತಿದ್ದು ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಭರಮನಿ ಅವರು ಸರ್ಕಾರಕ್ಕೆ ರಾಜೀನಾಮೆ ಸಲ್ಲಿಸಿದ್ದು, ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ.
ಧಾರವಾಡ: ಕೆಲ ತಿಂಗಳುಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾಗಿದ್ದ ಧಾರವಾಡ ಎಎಸ್‌ಪಿ ನಾರಾಯಣ.ವಿ.ಭರಮನಿ ಅವರು ಸ್ವಯಂ ಘೋಷಿತ ರಾಜೀನಾಮೆಗೆ ಮುಂದಾಗಿದ್ದಾರೆ.ಈಗಾಗಲೇ ನಾರಾಯಣ ವಿ ಭರಮನಿ ರಾಜೀನಾಮೆಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಅವರ ಮನವೊಲಿಸುವ ಕಾರ್ಯವು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಂದ ನಡೆಯುತ್ತಿದೆ ಎನ್ನಲಾಗಿದೆ. ಈ ನಡುವೆ ಸಿಎಂ ವೇದಿಕೆ ಮೇಲೆ ಅವಮಾನ ಮಾಡಿದ್ದಕ್ಕೆ ಬೇಸರಗೊಂಡು ನಾರಾಯಣ.ವಿ.ಭರಮನಿ ಅವರು ರಾಜೀನಾಮೆಗೆ ಮುಂದಾಗಿದ್ದ ಎಂಬ ಮಾತುಗಳು ಕೇಳಿಬಂದಿವೆ.
ಆ ದಿನ ವೇದಿಕೆಯಲ್ಲಿ ಏನಾಗಿತ್ತು?
ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ವೇದಿಕೆಗೆ ಕರೆದು ಹೊಡೆಯಲು ಕೈ ಎತ್ತಿದ್ದು ವಿವಾದಕ್ಕೆ ಕಾರಣವಾಗಿತ್ತು. ವೇದಿಕೆ ಮೇಲೆ ಸಿದ್ದರಾಮಯ್ಯ ಅವರು ಹಿರಿಯ ಪೊಲೀಸ್ ಅಧಿಕಾರಿಗೆ “ಏಯ್.. ಯಾರಿಲ್ಲಿ ಎಸ್‌ಪಿ?” ಎಂದು ಕೂಗಿ ಕೈ ಎತ್ತಲು ಮುಂದಾದರು. ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಸಿದ್ದರಾಮಯ್ಯ ಕೋಪಗೊಂಡಿದ್ದರು. ಸಿದ್ದರಾಮಯ್ಯ ಅವರ ಈ ವರ್ತನೆಗೆ ಅನೇಕರು ಆಕ್ಷೇಪ ವ್ಯಕ್ತವಾಗಿತ್ತು.