ಬೆಂಗಳೂರು,ಜು.14- ಬೆಂಗಳೂರು ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಇಂದು ರಾತ್ರಿಯಿಂದ ಒಂದು ವಾರ ಕಾಲ ಜÁರಿಗೆ ಬರಲಿರುವ ಲಾಕ್‍ಡೌನ್ ಸಂದರ್ಭದಲ್ಲಿ ಬಹುತೇಕ ಎಲ್ಲ ಸೇವೆಗಳು ಬಂದ್ ಆಗಲಿವೆ.
ಕೊರೊನಾ ಸೋಂಕು ತಡೆಯುವ ಸಲುವಾಗಿ ಸರ್ಕಾರ ಇಂದು ರಾತ್ರಿ 8ರಿಂದ ಜುಲೈ 22ರ ಬೆಳಗಿನ ಜಾವ 5 ಗಂಟೆವರೆಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಲು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ.
ಹೀಗಾಗಿ ಇಂದು ಮಧ್ಯಾಹ್ನ 12ರಿಂದಲೇ ದಿನಸಿ ಅಂಗಡಿಗಳೂ ಸಹ ಕಾರ್ಯಾಚರಿಸುವಂತಿಲ್ಲ ಎಂದು ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹಾಗಾಗಿ ಇಂದು ರಾತ್ರಿ 8ರಿಂದ ಮುಂದಿನ ಒಂದು ವಾರಗಳ ಕಾಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್‍ಡೌನ್ ಜಾರಿಗೊಳಿಸಿರುವುದರಿಂದ ಸಾವಿರಾರು ಮಂದಿ ಬೆಂಗಳೂರು ಬಿಟ್ಟು ವಲಸೆ ಹೊರಟಿದ್ದಾರೆ.
ರಾತ್ರಿ 8ರಿಂದ 1 ವಾರ ಬೆಂಗಳೂರು ಲಾಕ್ಡೌನ್ ಆಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯವಸ್ತು ಖರೀದಿಗೆ ಸೂಪರ್ ಮಾರ್ಕೆಟ್ಗೆ ಜನ ಮುಗಿಬಿದ್ದಿದ್ದಾರೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಸೂಪರ್ ಮಾರ್ಕೆಟ್ ಮುಂದೆ ಜನ ಸಾಲು ಸಾಲಾಗಿ ನಿಂತು ಖರೀದಿಗೆ ಮುಂದಾಗಿರುವ ದೃಶ್ಯಗಳು ಕಂಡು ಬಂದಿವೆ.
ದೈಹಿಕ ಅಂತರ ದೃಷ್ಟಿಯಿಂದ 10 ಜನರಿಗೆ ಮಾತ್ರ ಸೂಪರ್ ಮಾರ್ಕೆಟ್ ಒಳಗೆ ಹೋಗಲು ಅವಕಾಶ ನೀಡಲಾಗುತ್ತಿದೆ. ಆ 10 ಜನರ ಸರದಿ ಮುಗಿದ ಬಳಿಕ ಉಳಿದವರನ್ನು 10 ಜನರಂತೆ ಖರೀದಿಗೆ ಅವಕಾಶ ನೀಡಲಾಗಿದೆ.
ಇನ್ನು ಅನೇಕ ಅಂಗಡಿ ಮುಂಗಟ್ಟುಗಳ ಮುಂದೆ ಇದೇ ರೀತಿಯ ದೃಶ್ಯ ಕಂಡು ಬಂದಿದೆ. ಬೆಂಗಳೂರು ಒಂದು ವಾರ ಸ್ತಬ್ಧವಾಗಲಿದ್ದು, ಒಂದು ವಾರಕ್ಕೆ ಬೇಕಾಗುವ ಎಲ್ಲಾ ಸಾಮಾನು ಇಂದೇ ಖರೀದಿಸಲು ಜನ ಮುಗಿಬಿದ್ದಿದ್ದಾರೆ.
ಲಾಕ್ ಡೌನ್ ಬಿಗಿಗೊಳಿಸುವ ಹಿನ್ನಲೆಯಲ್ಲಿ ನಗರ ಪೆÇಲೀಸ್ ಕಮಿಷನರೇಟ್ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೆÇಲೀಸರು ಲಾಕ್ಡೌನ್ಗೆ ಸಕಲ ಸಿದ್ಧತೆ ನಡೆಸಿದ್ದಾರೆ.
ಇಂದು ರಾತ್ರಿ 8 ಗಂಟೆಯಿಂದಲೇ ಜಿಲ್ಲೆಯ ಎಲ್ಲ ಗಡಿಭಾಗಗಳನ್ನು ಸಂಪೂರ್ಣ ಬಂದ್ ಮಾಡಲಿದ್ದಾರೆ. ಆರೋಗ್ಯ ಸೇವೆ, ದಿನಸಿ ವಸ್ತುಗಳ ಖರೀದಿ ಸೇರಿ ತುರ್ತು ಸೇವೆಗಳನ್ನು ಹೊರತು ಪಡಿಸಿ ಮತ್ಯಾವುದೇ ಕಾರಣಕ್ಕೂ ಜನರು ಹೊರಗಡೆ ಬರುವಂತಿಲ್ಲ.
ಇಂದು ಬೆಳಗ್ಗೆಯೇ ಎರಡೂ ಜಿಲ್ಲೆಗಳಲ್ಲಿ ಐಪಿಸಿ ಸೆಕ್ಷನ್ 144 ಅಡಿ ಪೆÇಲೀಸ್ ಅಧಿಕಾರಿಗಳು ನಿರ್ಬಂಧ ವಿಧಿಸಲಿದ್ದಾರೆ. ಇದು ಜು.22ರ ಬೆಳಗಿನ ಜಾವದವರೆಗೂ ಜಾರಿಯಲ್ಲಿ ಇರಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್ಡೌನ್-1ರಲ್ಲಿ ಜಾರಿಯಾಗಿದ್ದ ಎಲ್ಲ ನಿಯಮಗಳು ಈ ಬಾರಿಯೂ ಅನ್ವಯ ಆಗಲಿದೆ. ಅನಗತ್ಯವಾಗಿ ಓಡಾಡುವರನ್ನು ತಪಾಸಣೆ ನಡೆಸಿ ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಕರಣವಾದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸಿ ವಾಹನ ಜಪ್ತಿ ಮಾಡ ಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗಡಿ ಸಂಪೂರ್ಣ ಬಂದ್: ಮೈಸೂರು ರಸ್ತೆ, ತುಮಕೂರು ರಸ್ತೆ, ಹೊಸೂರು ರಸ್ತೆ, ಕೋಲಾರ, ಹಳೆ ಮದ್ರಾಸ್ ರಸ್ತೆ ಮತ್ತು ಕನಕಪುರ ರಸ್ತೆಗಳಲ್ಲಿ ಎರಡೂ ಜಿಲ್ಲಾ ಪೆÇಲೀಸರು ಸಮನ್ವಯ ಆಧಾರದ ಮೇಲೆ ಚೆಕ್ಫೋಸ್ಟ್ ನಿರ್ಮಾಣ ಮಾಡಿಕೊಂಡಿದ್ದಾರೆ. ಜಿಲ್ಲೆಯಿಂದ ಹೊರ-ಒಳ ಬರುವ ವಾಹನಗಳನ್ನು ತಪಾಸಣೆ ನಡೆಸಿ ಕಳುಹಿಸಲಾಗುತ್ತದೆ.
ರಾಜ್ಯ ಪೊಲೀಸ್ ಮಹಾ ನಿದೇರ್ಶಕ ಪ್ರವೀಣ್ ಸೂದ್ ಅವರ ಆದೇಶದಂತೆ ಇಂದು ಸಂಜೆಯಿಂದಲೇ ನಗರದಲ್ಲಿ ವಾಹನ ಸವಾರರ ಓಡಾಟಕ್ಕೆ ಕಡಿವಾಣ ಬಿದ್ದಿದ್ದು, ರಾತ್ರಿ 8 ಗಂಟೆಯಿಂದ ನಗರದಿಂದ ಹೊರಹೋಗುವ ಮೈಸೂರು ರಸ್ತೆ, ತುಮಕೂರು ರಸ್ತೆ, ಕೋಲಾರ ಕನಕಪುರ ರಸ್ತೆ ಎಲ್ಲಾ ಗಡಿ ಭಾಗಗಳಿಗೆ ಬ್ಯಾರಿಕೇಡ್ ಹಾಕಿ ಭದ್ರತೆ ನಿಯೋಜನೆ ಮಾಡಲಾಗಿದೆ. ಹಾಗೆ 144 ಸೆಕ್ಷನ್ ಕೂಡ ಜಾರಿಯಲ್ಲಿರುತ್ತದೆ.
ಹೋಟೆಲ್, ರೆಸ್ಟೋರೆಂಟ್, ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಕ್ರೀಡಾ ಸಂಕೀರ್ಣ ಇರಲ್ಲ. ರಾಜ್ಯದ ಹೊರಗೆ, ರಾಜ್ಯದೊಳಗೆ ಷರತ್ತುಗಳಿಗೆ ಒಳಪಟ್ಟು ಮಾತ್ರ ಪ್ರಯಾಣಿಕ ವಾಹನಗಳು ಸಂಚರಿಸಲಿವೆ.
ಕೇಂದ್ರ ಸರಕಾರಿ ಕಚೇರಿಗಳು ಸಹ ಮುಚ್ಚತಕ್ಕದ್ದು ಎಂದು ರಾಜ್ಯ ಸರಕಾರವು ಆದೇಶಿಸಿದೆ. ಇನ್ನು ಈಗಾಗಲೇ ಕಾಯ್ದಿರಿಸಲಾದ ರೈಲು, ವಿಮಾನ ಪ್ರಯಾಣಿಕರಿಗೆ ಮಾತ್ರ ಬೆಂಗಳುರಿಗೆ ಆಗಮಿಸಲು ಅಥವಾ ತೆರಳಲು ಅನುಮತಿ ನೀಡಲಾಗಿದೆ.
ತುರ್ತು ಸಂದರ್ಭಗಳಿಗೆ ಮಾತ್ರ ರಸ್ತೆಗಳಲ್ಲಿ ಆಟೊ-ಟ್ಯಾಕ್ಸಿಗಳು ಓಡಾಒಲಿವೆ ಎಂದು ಕಟ್ಟುಪಾಡುಗಳಲ್ಲಿ ಹೇಳಲಾಗಿದೆ.ಯಾವುದೇ ಕಾರಣಕ್ಕೂ ಈ ಲಾಕ್ಡೌನ್ ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಣೆ ಆಗದು ಎಂದು ಬಿಎಸ್‍ವೈ ಅಭಯ ನೀಡಿದ್ದಾರೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವಿಧಿಸಲಾಗಿರುವ 1 ವಾರದ ಲಾಕ್ ಡೌನ್ ಅನ್ನು ವಿಸ್ತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಜನರು ಆತಂಕಪಡದೆ, ವದಂತಿಗಳಿಗೆ ಕಿವಿಗೊಡದೆ, ಸಹಕರಿಸಬೇಕೆಂದು ಸಿಎಂ ಕೋರಿದ್ದಾರೆ.
ಈ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕಾಗಿ ಲಾಕ್‍ಡೌನ್ ವಿಧಿಸಲಾಗಿದೆ. ಈ ಒಂದು ವಾರದೊಳಗೆ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು, ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದಾರೆ.
ಸಿಬ್ಬಂದಿ ಕೊರತೆ ಇಲ್ಲ: ಕೋವಿಡ್ ಸೋಂಕಿಗೆ ಮತ್ತು ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ ಪೆÇಲೀಸರಿಗೆ ಚಿಕಿತ್ಸೆ ಮತ್ತು ಕ್ವಾರಂಟೈನ್ ಮಾಡಲಾಗಿದೆ. ಬೆಂಗಳೂರು ನಗರದಲ್ಲಿಯೇ 560 ಪೊಲೀಸರಿಗೆ ಸೋಂಕು ತಗಲಿದೆ. ಇವರೊಂದಿಗೆ ಸಂಪರ್ಕದಲ್ಲಿ ಇದ್ದವರ ಪಟ್ಟಿ ಸಹ ಹೆಚ್ಚಾಗುತ್ತಿದೆ. ಜತೆಗೆ 50 ವರ್ಷ ಮೇಲ್ಪಟ್ಟ ಅಧಿಕಾರಿ/ಸಿಬ್ಬಂದಿಗೆ ರಜೆ ನೀಡಲಾಗಿದೆ. ಆದರೂ ಸಿಬ್ಬಂದಿಗೆ ಕೊರತೆ ಇಲ್ಲವೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ 6 ತಿಂಗಳ ಸೇವೆಗೆ 1,900 ಹೋಂಗಾರ್ಡ್‍ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಜತೆಗೆ ನಗರದಲ್ಲಿ ಬಹುತೇಕರು ಯುವ ಸಿಬ್ಬಂದಿ ಇದ್ದಾರೆ. ತರಬೇತಿ ಪಡೆಯುತ್ತಿದ್ದ ಪೇದೆಗಳು ಮತ್ತು ಸಬ್‍ಇನ್ಸ್ಪೆಕ್ಟರ್ಗಳು ಠಾಣೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
# ಏನೇನು ಲಭ್ಯ :
ಕಚೇರಿಗೆ ಹೋಗುವವರು ತಮ್ಮ ಕಚೇರಿಯ ಐಡಿ ಕಾರ್ಡ್ ತೋರಿಸಿ ಪ್ರಯಾಣ ಮಾಡಬಹುದು. ಹೋಟೆಲ್‍ಗಳು ಬಂದ್ ಇದ್ದರೂ ಪಾರ್ಸಲ್‍ಗೆ ಅವಕಾಶವಿದೆ. ಮದ್ಯದಂಗಡಿಗಗಳಲ್ಲೂ ಪಾರ್ಸೆಲ್‍ಗೆ ಮಾತ್ರ ಅವಕಾಶ (ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಅವಕಾಶ ಕಲ್ಪಿಸಲಾಗಿದೆ)
ಈಗಾಗಲೇ ವಿಮಾನ ಅಥವಾ ರೈಲು ಟಿಕೆಟನ್ನು ಮುಂಗಡವಾಗಿ ಬುಕ್ ಮಾಡಿದ್ದರೆ ಆ ಟಿಕೆಟ್ ತೋರಿಸಿ ಪ್ರಯಾಣಿಕರು ಪ್ರಯಾಣ ಮಾಡಬಹುದು, ಆದರೆ ಇನ್ನುಮುಂದೆ ಟಿಕೆಟ್ ಬುಕ್ಕಿಂಗ್ ಅವಕಾಶ ಇಲ್ಲ. ಬ್ಯಾಂಕ್, ಎಟಿಎಂ, ಪೆಟ್ರೋಲ್ ಪಂಪ್ ಕಾರ್ಯ ನಿರ್ವಹಿಸಲಿವೆ.
ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆಟೋ, ಕ್ಯಾಬ್ ಬಳಕೆಗೆ ಅವಕಾಶ ಸಾಮಾನ್ಯವಾಗಿ ಇರುವಂತೆ ತುರ್ತು ಸೇವೆಗಳಾದ ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಹೋಂ ಗಾರ್ಡ್, ಸಿವಿಲ್ ಡಿಫೆನ್ಸ್, ಅಗ್ನಿ ಶಾಮಕ, ತುರ್ತು ಸೇವೆಗಳು ಕಾರ್ಯ ನಿರ್ವಹಿಸಲಿವೆ.
ಔಷಧಿ, ತರಕಾರಿ, ಹಣ್ಣು, ದಿನ ಪತ್ರಿಕೆ, ಆನ್ಲೈನ್ ಫುಡ್, ಮಾಂಸದಂಗಡಿ ತೆರೆದಿರುತ್ತವೆ. ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು ಓಪನ್ ಇರಲಿವೆ. ಬಿಬಿಎಂಪಿ ಮತ್ತು ಕಾರಾಗೃಹ ಇಲಾಖೆ ಕಾರ್ಯ ನಿರ್ವಹಿಸಲಿದ್ದು, ಇತರ ಸರ್ಕಾರಿ ಕಚೇರಿಗಳೂ ಕೆಲಸ ಮಾಡಲಿವೆ.
ಎಲ್ಲಾ ರೀತಿಯ ಕೃಷಿ ಚಟುವಟಿಕೆಗೆ ಅವಕಾಶವಿದೆ. ಇದರಲ್ಲಿ ಕೃಷಿ ಏಜೆನ್ಸಿ, ರಸಗೊಬ್ಬರ ಮಾರುಕಟ್ಟೆ, ಕೃಷಿ ಗೊಬ್ಬರ, ಹಣ್ಣು ತರಕಾರಿ ಮಾರುಕಟ್ಟೆಗೆ ಅವಕಾಶವಿದ್ದು, ಮೀನುಗಾರಿಕೆ ಹಾಗೂ ಪಶುಸಂಗೋಪನೆ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದೆ.
# ಏನು ಇರಲ್ಲ:
ರಾಜಕೀಯ, ಧಾರ್ಮಿಕ, ಮದುವೆ, ಸಮಾರಂಭಗಳಿಗೆ ಅವಕಾಶವಿಲ್ಲ, ಕೆಎಸ್‍ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ , ಪೂರ್ಣವಾಗಿ ಬಂದ್, ಬೈಕ್, ಕಾರು ಸಂಚಾರ ಇಲ್ಲ, ಮಾಲ್, ಶಾಪಿಂಗ್ ಮಾಲ್ ತೆರೆಯಲ್ಲ, ಮೊಬೈಲ್ ಶಾಪ್, ಎಲೆಕ್ಟ್ರಿಲ್ ಶಾಪ್ ತೆರೆಯುವಂತಿಲ್ಲ, ವಾಣಿಜ್ಯ, ಖಾಸಗಿ ಸಂಸ್ಥೆ ಸಂಪೂರ್ಣವಾಗಿ ಮುಚ್ಚಲಿವೆ.ಹೊಸ ವಿಮಾನ, ರೈಲು ಸಂಚಾರಕ್ಕೆ ಅವಕಾಶ ನೀಡಿಲ್ಲ.ಶಾಲೆ- ಕಾಲೇಜ್, ಶಿಕ್ಷಣ/ಕೋಚಿಂಗ್ ಸಂಸ್ಥೆಗಳು ಬಂದ್, ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ. ಸಿನಿಮಾ ಮಂದಿರ, ಜಿಮ್, ಸ್ಟೇಡಿಯಂಗಳು, ಮನರಂಜನಾ ಉದ್ಯಾನ , ರಂಗಮಂದಿರ, ಧಾರ್ಮಿಕ ಸ್ಥಳಗಳು ಬಂದ್ ಆಗಲಿವೆ.