ದಾವಣಗೆರೆ : ಲೋಕಸಭೆ ಚುನಾವಣೆಯಲ್ಲಿ ಯಾರ ಬಳಿ ಎಷ್ಟು ಕೋಟಿ ರೂಪಾಯಿ ಹಣ ಪಡೆದಿದ್ದೀಯಾ ಎಂಬುದು ಗೊತ್ತಿದೆ. ಭದ್ರಾವತಿಯಲ್ಲಿ ಯಾವ ಮಹಿಳೆ ಮನೆಗೆ ಮರಳು ಕಳಿಸುತ್ತಿದ್ದರು ಎಂಬುದು ಗೊತ್ತಿದೆ ಎಂದು ಮಾಜಿ ಸಚಿವ ಎಂ. ಪಿ ರೇಣುಕಾಚಾರ್ಯ ವಿರುದ್ಧ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.
ರೇಣುಕಾಚಾರ್ಯಗೆ ಸವಾಲು ಹಾಕಿದ ಶಾಸಕ: ದಾವಣಗೆರೆ ನಗರದ ಆಂಜನೇಯ ಬಡಾವಣೆಯ ನಿವಾಸದಲ್ಲಿ ಮಾತನಾಡಿದ ಅವರು, ಕ್ಯಾಶಿನೋ ನಡೆಸುತ್ತಿದ್ದೇವೆ, ಇಸ್ಪೀಟು, ಐಪಿಎಲ್ ಬೆಟ್ಟಿಂಗ್ ಆಡಿಸುತ್ತೇವೆ ಎಂದು ಆರೋಪ ಮಾಡಿದ್ದೀರಿ. ಇದು ರಾಜಕೀಯ ಚಪಲಕ್ಕೆ ಹೇಳಿದ್ದಾರೆ. ನನ್ನ ಮೇಲೆ ಮಾಡಿದ ಆರೋಪಗಳ ಬಗ್ಗೆ ಮಾವಿನಹೊಳೆ ಮಹಾರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ಬಂದು ಪ್ರಮಾಣ ಮಾಡಿ, ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಿ ಎಂದು ಒತ್ತಾಯಿಸಿದ್ದಾರೆ.ಹೊನ್ನಾಳಿಯಲ್ಲಿ ಮರಳು ದಂಧೆ ಮಾಡ್ತಿದ್ದರು. ನೀವು ಯಾರ್ಯಾರಿಗೆ ಮರಳು ಮಾರಿದ್ದೀರಿ ಎಂಬುದು ನನಗೆ ಗೊತ್ತಿದೆ. ನಮ್ಮ ಸಮಾಜದ ಯುವಕರನ್ನ ಕಟ್ಟಿಕೊಂಡು ಈ ರೀತಿ ಹೇಳಿಕೆ ನೀಡಿದ್ದೀರಿ. ನಾನು ಲಾಟರಿ ಶಾಸಕನಲ್ಲ, ನಾನು ಕೊರೊನಾ ಕಾಲದಲ್ಲಿ ಮಾಡಿದ ಕೆಲಸ ಮರೆತಿಲ್ಲ. ದೇವರಹಳ್ಳಿ ಕೆರೆಗೆ ನಾನೇ ಸ್ವಂತ ಖರ್ಚಿನಲ್ಲಿ ನೀರು ತುಂಬಿದ್ದೇನೆ. 60 ಸಾವಿರ ಆಹಾರದ ಕಿಟ್ ವಿತರಿಸಿದ್ದೇನೆ ಎಂದು ಹೇಳಿದ್ದಾರೆ.
ಮೊಳಕಾಲುದ್ದ ನೀರಲ್ಲಿ ತೆಪ್ಪ ಓಡಿಸಿ ಅಪಹಾಸ್ಯಕ್ಕೆ ಗುರಿಯಾಗಿದ್ದೆ : ಮೊಳಕಾಲುದ್ದ ನೀರಿನಲ್ಲಿ ತೆಪ್ಪ ಓಡಿಸಿ ಅಪಹಾಸ್ಯಕ್ಕೆ ಗುರಿಯಾಗಿದ್ದೆ. ಲೋಕಸಭೆ ಚುನಾವಣೆಯಲ್ಲಿ ಯಾರ ಬಳಿ ಎಷ್ಟು ಕೋಟಿ ರೂಪಾಯಿ ಪಡೆದಿದ್ದಿಯಾ ಎಂಬುದು ಗೊತ್ತಿದೆ. ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಹಿನ್ನೆಲೆ ರೇಣುಕಾಚಾರ್ಯ ಬಿಜೆಪಿಯನ್ನು ತೊರೆಯಲಿಲ್ಲ. ಆದ್ರೆ ಡಿಸಿಎಂ ಡಿ. ಕೆ. ಶಿವಕುಮಾರ ಮನೆಗೆ ಬಂದಿದ್ದು ನನಗೂ ಗೊತ್ತಿದೆ ಎಂದು ಚಾಟಿ ಬೀಸಿದ್ದಾರೆ.
ಯಾವ ಕಡೆ ಏನ್ ಸಂಬಂಧ ಇಟ್ಟಿದ್ದಾರೆ ಗೊತ್ತಿದೆ : ರೇಣುಕಾಚಾರ್ಯ ಯಾವ ಯಾವ ಕಡೆ ಏನೇನು ಸಂಬಂಧ ಇಟ್ಟಿದ್ದಾರೆ ಗೊತ್ತಾಗಿದೆ. ಈ ಎಲ್ಲ ವಿಚಾರ ವಿಜಯೇಂದ್ರಗೆ ತಿಳಿಸುವೆ. ಇದೇ ರೇಣುಕಾಚಾರ್ಯ ಲೋಕಸಭೆ ಚುನಾವಣೆ ವೇಳೆ ದುಡ್ಡು ತೆಗೆದುಕೊಂಡಿದ್ದ ಬಗ್ಗೆ ಮಾಹಿತಿ ಇದೆ. ಹಾಗಂತ ಇವರ ಬೆಂಬಲದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿಲ್ಲ. ಕೆಲ ಸಾಧು ಲಿಂಗಾಯತರ ಯುವಕರು ಬೆಳೆಯುವುದು ರೇಣುಕಾಚಾರ್ಯಗೆ ಇಷ್ಟವಿಲ್ಲ. ರೇಣುಕಾಚಾರ್ಯ ಲಾಟರಿ ಶಾಸಕ. ನಾನು ಹೋರಾಟ ಮಾಡಿ ಬಂದಿದ್ದೇನೆ ಎಂದಿದ್ದಾರೆ.
Laxmi News 24×7