ಜಮ್ಮು, ಡಿ.20- ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ಧಾರಿಯಲ್ಲಿ ಕಳೆದ 14 ಗಂಟೆಗಳಿಂದ 270 ಕಿಲೋ ಮೀಟರ್ ಉದ್ಧಕ್ಕೂ ಸಾಲು ಗಟ್ಟಿನಿಂತಿದ್ದ ಸಂಚಾರ ದಟ್ಟಣೆಯಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ತೆರವುಗೊಳಿಸಲಾಗಿದೆ.
ಶನಿವಾರ ರಾತ್ರಿ 7 ಗಂಟೆ ಸುಮಾರಿಗೆ ರಂಬಾನ್ ಜಿಲ್ಲೆಯ ಚಂದರ್‍ಕೋಟೆ ಬಳಿಯ ಭೂಂ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿತ್ತು. ಸುಮಾರು 2 ಸಾವಿರ ವಾಹನಗಳು ಭೂ ಕುಸಿತದಿಂದ ಮುಂದೆ ಸಾಗಲಾಗದೆ ರಸ್ತೆಯಲ್ಲಿ ನಿಲ್ಲಬೇಕಾಯಿತು. ಇದರಿಂದ ಜಮ್ಮು ಕಾಶ್ಮೀರ ಹೆದ್ಧಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.
ತಕ್ಷಣವೇ ರಸ್ತೆ ನಿರ್ವಹಣೆ ಮಾಡುವ ಸಂಸ್ಥೆಯವರು ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆಗೆ ಇಳಿದಿತ್ತು. ರಾತ್ರಿಯಿಡಿ ನಡೆದ ಕಾರ್ಯಚರಣೆಯಿಂದಾಗಿ ಕೊನೆಗೂ ಭೂ ಕುಸಿತದ ಅವಶೇಷಗಳನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಭಾನುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಹೆದ್ಧಾರಿಯನ್ನು ತೆರವುಗೊಳಿಸಲಾಗಿದ್ದು, ಸಂಚಾರ ವ್ಯವಸ್ಥೆ ಮತ್ತೆ ಆರಂಭವಾಗಿದೆ.
ಸುಮಾರು 270 ಕಿಲೋ ಮೀಟರ್ ರಸ್ತೆಯುದ್ಧಕ್ಕೂ ಸಾಲುಗಟ್ಟಿ ನಿಂತಿದ್ದ ವಾಹನಗಳಲ್ಲಿ ಪ್ರಯಾಣಿಕರು ಕೊರೆಯುವ ಚಳಿಯಲ್ಲಿ ರಾತ್ರಿ ಕಳೆದಿದ್ದರು. ಭೂ ಕುಸಿತದಿಂದಾಗಿ ಲಘು ವಾಹನಗಳನ್ನು ಪರ್ಯಾಯ ರಸ್ತೆಯ ಮೂಲಕ ಕಳುಹಿಸುವ ಪ್ರಯತ್ನ ನಡೆದಿದೆ.