ಗಂಗಾವತಿ: ”ಕನ್ನಡ ಚಿತ್ರರಂಗದ ಪಾಲಿಗೆ 70ರಿಂದ 90ರ ದಶಕ ಸುವರ್ಣಯುಗವಾಗಿತ್ತು. ಆದ್ರೀಗ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಕನ್ನಡ ಚಿತ್ರರಂಗದ ಅಳಿವು-ಉಳಿವು ಸರ್ಕಾರದ ಕೈಯಲ್ಲಿದೆ” ಎಂದು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ತಿಳಿಸಿದರು.
‘ಸೆಪ್ಟಂಬರ್ 10’ ಶೀರ್ಷಿಕೆಯ ಚಿತ್ರದ ಪ್ರಚಾರಾರ್ಥ ಆಗಮಿಸಿದ್ದ ಅವರು ನಗರದಲ್ಲಿ ಈ ಬಗ್ಗೆ ಮಾತನಾಡಿದರು.
‘…ಇಲ್ಲವಾದಲ್ಲಿ ಇನ್ನೊಂದು 10-15 ವರ್ಷಕ್ಕೆ ಕನ್ನಡ ಚಿತ್ರರಂಗ ನಾಶ’: ಕನ್ನಡ ಸಿನಿಮಾಗಳು ಉಳಿಬೇಕಾದರೆ ಸರ್ಕಾರವೇ ಮಿನಿ ಥಿಯೇಟರ್ಗಳನ್ನು ನಿರ್ಮಾಣ ಮಾಡಬೇಕು. ಕೇವಲ 50 ಆಸನದ ಚಿತ್ರಮಂದಿರಗಳನ್ನು ನಿರ್ಮಿಸಬೇಕು. ಇದಕ್ಕೆ ಕೇವಲ 10ರಿಂದ 20 ರೂಪಾಯಿ ಮಾತ್ರ ಟಿಕೆಟ್ ದರ ನಿಗದಿಪಡಿಸಬೇಕು. ಇಂದು ಕನ್ನಡ ಸಿನಿಮಾಗಳನ್ನು ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಜನರು ಮಾತ್ರ ಚಿತ್ರಮಂದಿರಕ್ಕೆ ಬಂದು ವೀಕ್ಷಿಸುತ್ತಿದ್ದಾರೆ. ಅವರಿಂದಲೇ ಸಿನಿಮಾ ರಂಗ ನಡೆಯುತ್ತಿದೆ. ಈ ವರ್ಗದವರು ಹೆಚ್ಚು ಸಿನಿಮಾ ನೋಡಬೇಕಾದರೆ ಸರ್ಕಾರದಿಂದಲೇ ಮಿನಿ ಥಿಯೇಟರ್ ಕಾನ್ಸೆಪ್ಟ್ ಬರಬೇಕು. ಇಲ್ಲವಾದಲ್ಲಿ ಇನ್ನೊಂದು 10-15 ವರ್ಷಕ್ಕೆ ಕನ್ನಡ ಚಿತ್ರರಂಗ ಸಂಪೂರ್ಣ ನಾಶವಾಗಲಿದೆ” ಎಂದು ಕಳವಳ ವ್ಯಕ್ತಪಡಿಸಿದರು.
ಬಹುತೇಕರು ಕಿರುತೆರೆಗೆ: “ಕನ್ನಡ ಚಿತ್ರರಂಗದ ಬಹುತೇಕ ನಟ-ನಟಿಯರು ಸಿನಿಮಾಗಳಲ್ಲಿ ಅವಕಾಶ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಿರುತೆರೆಗೆ ಹೋಗಿದ್ದಾರೆ. ಇಂದು ಸಿನಿಮಾ ಕ್ಷೇತ್ರಕ್ಕಿಂತ ಟಿವಿ ಧಾರವಾಹಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇದೇ ಕಾರಣಕ್ಕೆ ಹೆಚ್ಚಿನ ಕಲಾವಿದರು ಕಿರುತೆರೆಗೆ ಹೋಗುತ್ತಿದ್ದಾರೆ. ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಲು ದೊಡ್ಡ ಬಂಡವಾಳ ಬೇಕು. ಆದರೆ ಕಿರುತೆರೆಗಳಲ್ಲಿ ಇಂತಹ ಸಮಸ್ಯೆ ಇರದು. ಅಲ್ಪ ಬಂಡವಾಳದಲ್ಲಿ ಧಾರವಾಹಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಕಲಾವಿದರಿಗೆ ಅವಕಾಶ ಇಲ್ಲದ ಕಾರಣಕ್ಕೆ ಕಿರುತೆರೆಗೆ ಹೋಗುತ್ತಿದ್ದಾರೆ” ಎಂದು ತಿಳಿಸಿದರು
Laxmi News 24×7