Breaking News

30 ವರ್ಷದ ಹಿಂದೆ ಲಂಚ ಸ್ವೀಕರಿಸಿದ್ದ ಗ್ರಾಮ ಲೆಕ್ಕಾಧಿಕಾರಿಗೆ ಈಗ ಶಿಕ್ಷೆ

Spread the love

ಬೆಳಗಾವಿ : 30 ವರ್ಷದ ಹಿಂದೆ ಉತಾರ ಕೊಡಲು 500 ರೂ. ಲಂಚ ಪಡೆದಿದ್ದ ಆಗಿನ ಗ್ರಾಮ‌ ಲೆಕ್ಕಾಧಿಕಾರಿಗೆ ಈಗ ಜೈಲು ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಆದರೆ, ದೂರು ನೀಡಿದ್ದ ರೈತ 5 ವರ್ಷಗಳ ಹಿಂದೆ ಮೃತಪಟ್ಟಿದ್ದು, ಲಂಚ ಸ್ವೀಕರಿಸಿದ್ದ ಅಧಿಕಾರಿ ಹಿಂಡಲಗಾ ಜೈಲು ಕಂಬಿ ಎಣಿಸುತ್ತಿದ್ದಾರೆ.

1995ರಲ್ಲಿ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ರೈತ ಲಕ್ಷ್ಮಣ ರುಕ್ಕಣ್ಣ ಕಟಾಂಬಳೆ ಅವರು ತಮ್ಮ ಸಹೋದರನೊಂದಿಗೆ ಜಮೀನು ಹಂಚಿಕೆ (ವಾಟ್ನಿ) ಮಾಡಿ ಉತಾರ ಕೊಡಲು ಕಡೋಲಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಅಂದಿನ ಗ್ರಾಮ ಲೆಕ್ಕಾಧಿಕಾರಿ ನಾಗೇಶ್ ದೊಂಡು ಶಿವಂಗೇಕರ್‌ 500 ರೂ. ಲಂಚ ಕೇಳಿದ್ದರು. ಈ ಕುರಿತು ಲೋಕಾಯುಕ್ತ ಅಧಿಕಾರಿಗಳಿಗೆ ರೈತ ಲಕ್ಷ್ಮಣ ಕಟಾಂಬಳೆ ಮಾಹಿತಿ ನೀಡಿದ್ದರು.

ಬಳಿಕ ಲಂಚ ಸ್ವೀಕರಿಸುವಾಗ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ನಾಗೇಶ ಶಿವಂಗೇಕರ್ ಅವರನ್ನು ಬಂಧಿಸಿದ್ದರು. ಪ್ರಕರಣ ಸಂಬಂಧ ಆಗಿನ ಬೆಳಗಾವಿ ಜಿಲ್ಲಾ ಲೋಕಾಯುಕ್ತ ಉಪ ಅಧೀಕ್ಷಕ ಎಂ.ಎಸ್‌. ದಂಡಿನ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಿಶೇಷ ನ್ಯಾಯಾಲಯವು 2006, ಜೂನ್ 14ರಂದು ನಾಗೇಶ ಅವರಿಗೆ ಒಂದು ವರ್ಷ ಕಠಿಣ ಶಿಕ್ಷೆ ಹಾಗೂ 1,000 ದಂಡ ವಿಧಿಸಿ ತೀರ್ಪು ನೀಡಿತ್ತು.Village accountant who accepted bribe 30 years ago now sentenced

ವಿಶೇಷ ನ್ಯಾಯಾಲಯ ತನ್ನ ವಿರುದ್ಧ ನೀಡಿದ ತೀರ್ಪಿನ ವಿರುದ್ಧ ನಾಗೇಶ ಶಿವಂಗೇಕರ್ ಧಾರವಾಡದ ಹೈಕೋರ್ಟ್ ಸಂಚಾರಿ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್, ಆಪಾದಿತ ಅಧಿಕಾರಿಯನ್ನು ಬಿಡುಗಡೆಗೊಳಿಸಿ 2012, ಮಾರ್ಚ್ 9ರಂದು ಆದೇಶ ಹೊರಡಿಸಿತ್ತು.

ಬಳಿಕ ಲೋಕಾಯುಕ್ತ ಅಧಿಕಾರಿಗಳು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಬೆಳಗಾವಿ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದ್ದು, ಇದೇ ಜೂನ್ 18ರಂದು ಮಹತ್ವದ ತೀರ್ಪು ನೀಡಿದೆ. ಆಪಾದಿತನ ವಿರುದ್ಧ ಬಂಧನ ವಾರಂಟ್ ಹೊರಡಿಸಲಾಗಿತ್ತು. ಆ ಆದೇಶದಂತೆ ಬುಧವಾರ ಬಂಧಿಸಲಾಗಿದೆ.

10 ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾಗಿರುವ ಗ್ರಾಮ ಲೆಕ್ಕಾಧಿಕಾರಿ: 10 ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತರಾಗಿರುವ 70 ವರ್ಷದ ನಾಗೇಶ್ ಶಿವಂಗೇಕ‌ರ್ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಬಳಿಕ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ. ವಿಪರ್ಯಾಸ ಎಂದರೆ ತಾನು ಸಲ್ಲಿಸಿದ್ದ‌ ದೂರಿಗೆ 30 ವರ್ಷಗಳ ಬಳಿಕ ನ್ಯಾಯ ಸಿಕ್ಕಿದೆ. ಆದರೆ, ದೂರು ನೀಡಿದ್ದ ಲಕ್ಷ್ಮಣ ಕಟಾಂಬಳೆ ಅವರು 5 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.

ತೀರ್ಪಿನ ಕುರಿತು ಲಕ್ಷ್ಮಣ ಕಟಾಂಬಳೆ ಅವರ ಒಡನಾಡಿ ಮತ್ತು ರೈತ ಹೋರಾಟಗಾರ ಅಪ್ಪಾಸಾಹೇಬ ದೇಸಾಯಿ ಅವರು ಈ ಟಿವಿ ಭಾರತದ ಜತೆ ಮಾತನಾಡಿದ್ದು, ತಡವಾಗಿ ಆದರೂ ನ್ಯಾಯ ಸಿಕ್ಕಿದೆ. ಇದರಿಂದ ಕಾನೂನಿನ ಮೇಲೆ ವಿಶ್ವಾಸ ಮತ್ತು ನಂಬಿಕೆ ಹೆಚ್ಚಾಗಿದೆ. ಜೊತೆಗೆ ನಮಗೆ ಸಮಾಧಾನ ತಂದಿದೆ. ಭ್ರಷ್ಟ ಅಧಿಕಾರಿಗಳಿಗೆ ಈ ತೀರ್ಪು ನಡುಕ ಹುಟ್ಟಿಸಿದೆ. ಲಂಚ ತಿಂದರೆ ನಮಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದನ್ನು ಸಾಬೀತುಪಡಿಸಿದೆ ಎಂದರು.

ತಮಿಳುನಾಡಿನ ಚೆನ್ನೈನಲ್ಲಿ ಪ್ರವಾಹ ಉಂಟಾದಾಗ 5 ಸಾವಿರ ರೂ. ಪರಿಹಾರದ ಚೆಕ್ ಅನ್ನು ಅಂದಿನ ಬೆಳಗಾವಿ ಜಿಲ್ಲಾಧಿಕಾರಿ ಎನ್.ಜಯರಾಮ್ ಅವರಿಗೆ ನೀಡಿ ಲಕ್ಷ್ಮಣ ಕಟಾಂಬಳೆ ಮಾನವೀಯತೆ ಮೆರೆದಿದ್ದರು. ಕಡೋಲಿ ಗ್ರಾಮದ ಶಿವಾಜಿ ಹೈಸ್ಕೂಲ್ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹಳಷ್ಟು ವರ್ಷ ಪ್ರೋತ್ಸಾಹಧನ ನೀಡುತ್ತಾ ಬಂದಿದ್ದರು. ಅಲ್ಲದೇ ದೇವಸ್ಥಾನಕ್ಕೆ ಬೆಳ್ಳಿ ದೇವರ ಮೂರ್ತಿ ಕಾಣಿಕೆ ನೀಡಿದ್ದರು. ಶಾಂತಾಯಿ ವೃದ್ಧಾಶ್ರಮಕ್ಕೂ ದೇಣಿಗೆ ನೀಡಿದ ಉದಾರಿ ಆಗಿದ್ದರು. ಸಮಾಜಮುಖಿ ಆಗಿದ್ದ ಅವರು ಬಡವರ ಬಗ್ಗೆ ಕಾಳಜಿ ಹೊಂದಿದ್ದರು. ಸತ್ಯ, ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಲಕ್ಷ್ಮಣ ಕಟಾಂಬಳೆ ಅವರನ್ನು ಅಪ್ಪಾಸಾಹೇಬ ದೇಸಾಯಿ ನೆನಪಿಸಿಕೊಂಡರು.


Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ