ಬೆಂಗಳೂರು: “ವಸತಿ ಮೀಸಲಾತಿ ಹೆಚ್ಚಳ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮದ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನವಾಗಿದೆ” ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, “ರಾಜ್ಯ ಸರ್ಕಾರದ ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ರಿಶ್ಚಿಯನ್, ಮುಸ್ಲಿಂ, ಜೈನರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಫಲಾನುಭವಿಗಳ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಚಿವ ಸಂಪುಟವು ಒಂದು ನಿರ್ಣಯವನ್ನು ಕೈಗೊಂಡಿದೆ. ಇದು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ (2019)ರ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನವಾಗಿದೆ” ಎಂದಿದ್ದಾರೆ.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಸ್ಥೆಗಳಲ್ಲಿ ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಬಳಕೆ ಮಾಡಿಕೊಂಡು ಅಲ್ಪಸಂಖ್ಯಾತ ಸಮುದಾಯಗಳಿಗೆ 15% ಭೌತಿಕ ಹಾಗೂ ಆರ್ಥಿಕ ಗುರಿಯನ್ನು ಸಾಧಿಸಬೇಕೆಂದು ಈ ಕಾರ್ಯಕ್ರಮ ಸ್ಪಷ್ಟವಾಗಿ ನಿರ್ದೇಶಿಸುತ್ತದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದಲೇ ನೀಡಲಾದ ಮಾರ್ಗಸೂಚಿಗಳಾಗಿದ್ದು, ಹಲವು ವರ್ಷಗಳಿಂದ ಜಾರಿಯಲ್ಲಿದೆ. ಇದೊಂದು ಅಸಂವಿಧಾನಿಕ ಅಥವಾ ತುಷ್ಟೀಕರಣ ನೀತಿಯಾಗಿದ್ದರೆ, ಈ ನಿಯಮವನ್ನು ಪಾಲನೆ ಮಾಡುವಂತೆ ಕೇಂದ್ರ ಸರ್ಕಾರ ಯಾಕೆ ಎಲ್ಲ ರಾಜ್ಯಗಳಿಗೆ ತಿಳಿಸಿದೆ? ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಯಾಕೆ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ” ಎಂದು ಪ್ರಶ್ನಿಸಿದ್ದಾರೆ.
“ನಮ್ಮ ನಿರ್ಣಯವು ವಸತಿ ಹಂಚಿಕೆಯಲ್ಲಿ ಹೆಚ್ಚುವರಿ ಮೀಸಲಾತಿಯನ್ನು ಇಡೀ ರಾಜ್ಯಕ್ಕೆ ಅನ್ವಯಿಸುವಂತದ್ದಲ್ಲ, ಕೇವಲ ನಿರ್ದಿಷ್ಟ ಸವಾಲುಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಪಸಂಖ್ಯಾತ ಜನಸಂಖ್ಯೆಯು 10% ಗಿಂತ ಕಡಿಮೆಯಿರುವ ಹಲವು ಪಂಚಾಯತಿಗಳಲ್ಲಿ ನಿಗದಿಪಡಿಸಲಾದ 10% ಮೀಸಲಾತಿಯ ಅವಕಾಶವು ಸದ್ಬಳಕೆಯಾಗುತ್ತಿರಲಿಲ್ಲ, ಹೀಗಾಗಿ ನಿಗದಿಪಡಿಸಲಾದ ಗುರಿಯನ್ನು ತಲುಪಲು ಮತ್ತು ಲೋಪದೋಷಗಳನ್ನು ತಡೆಯಲು ಇಂತಹ ಪಂಚಾಯತಿಗಳಿಂದ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಿರುವ ಕಡೆಗೆ ಗರಿಷ್ಠ 15% ಮಿತಿಗೆ ಒಳಪಟ್ಟು ಮರುಹಂಚಿಕೆ ಮಾಡಲಾಗಿದೆ” ಎಂದು ವಿವರಿಸಿದ್ದಾರೆ.