ಕಲಬುರಗಿ: ಜಿಲ್ಲಾ ನ್ಯಾಯಾಲಯ ಆವರಣದಲ್ಲೇ ತೀವ್ರ ಹೃದಯಾಘಾತ ಸಂಭವಿಸಿ ಮೂರನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಶ್ವನಾಥ್ ಮುಗುಟಿ (44) ಅವರು ಸೋಮವಾರ ವಿಧಿವಶರಾಗಿರುವ ಘಟನೆ ನಡೆದಿದೆ.
ದೈನಂದಿನಂತೆ ಮನೆಯಿಂದ ಬೆಳಗ್ಗೆ ತಿಂಡಿ ಮುಗಿಸಿ ನ್ಯಾಯಾಲಯಕ್ಕೆ ಬಂದು ತಮ್ಮ ಕಚೇರಿಯಲ್ಲಿ ಕುಳಿತಿರುವಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಗುಪ್ತಲಿಂಗ್ ಪಾಟೀಲ್ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಮೂಲದವರಾದ ನ್ಯಾ. ವಿಶ್ವನಾಥ ಅವರು, ಕಳೆದ ಜೂ. 2ರಂದು (15ದಿನಗಳ ಹಿಂದಷ್ಟೇ) ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ನಿಯೋಜನೆಗೊಂಡಿದ್ದರು. ಮೃತರಿಗೆ ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ. ಪಾರ್ಥಿವ ಶರೀರವನ್ನು ಬನಹಟ್ಟಿಗೆ ತೆಗೆದುಕೊಂಡು ಹೋಗಲಾಗಿದೆ.
ಈ ಅನಿರೀಕ್ಷಿತ ಮತ್ತು ಆಘಾತಕಾರಿ ಘಟನೆ ನ್ಯಾಯಾಂಗ ವಲಯದಲ್ಲಿ ನೀರವ ಮೌನ ಆವರಿಸಿದೆ. ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಮೌನಾಚರಣೆ ಮೂಲಕ ನ್ಯಾಯಾಧೀಶರು, ನ್ಯಾಯವಾದಿಗಳು, ಸಾರ್ವಜನಿಕರು ನ್ಯಾ. ವಿಶ್ವನಾಥ ಅವರ ಪಾರ್ಥಿವ ಶರೀರ ಹೊತ್ತು ಆಂಬ್ಯುಲೈನ್ಸ್ ಮುಂದೆ ಮೌನಾಚರಣೆ ನಡೆಸಿ ಅಂತಿಮ ನಮನ ಸಲ್ಲಿಸಿದರು.
Laxmi News 24×7