ದಾವಣಗೆರೆ: ಸಿಸೇರಿಯನ್ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಎರಡೇ ದಿನದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟ ಘಟನೆ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ದುರ್ಗಮ್ಮ (21) ಎಂಬವರೇ ಮೃತ ಬಾಣಂತಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ತನ್ನ ತಾಯಿ ಮನೆಗೆ ಹೆರಿಗೆ ಬಂದಿದ್ದ ಅವರಿಗೆ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪೋಷಕರು ತಕ್ಷಣ ಹತ್ತಿರದ ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಹರಪನಹಳ್ಳಿ ವೈದ್ಯರು ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ಹೆಣ್ಣು ಮಗು ಜನಿಸಿತ್ತು. ಬಳಿಕ ಅವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಪೋಷಕರ ಆರೋಪವೇನು?: “ಹೆರಿಗೆಗಾಗಿ ಹರಪನಹಳ್ಳಿ ತಾಲೂಕು ಆಸ್ಪತ್ರೆಗೆ ಮಗಳನ್ನು ದಾಖಲು ಮಾಡಿದ್ದೆವು. ಸಿಸೇರಿಯನ್ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದರು. ಆದರೆ ಹೆರಿಗೆ ಬಳಿಕ ಹೊಲಿಗೆ ಹಾಕುವ ವೇಳೆ ವೈದ್ಯರು ಎಡವಟ್ಟು ಮಾಡಿದ್ದಾರೆ. ನಂತರ ನಿಮ್ಮ ಮಗಳ ಆರೋಗ್ಯ ಸ್ಥಿತಿ ಚಿಂತಾಜನಕವಿದೆ ಎಂದು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ 12 ಬಾಟಲ್ ರಕ್ತ ಸೇರಿಸಿದ್ದರು. ಗರ್ಭಕೋಶ ಹೊರತೆಗೆಯಬೇಕೆಂದರು. ಆದರೆ, ಎಲ್ಲಾ ಮಾಡಿದರೂ ನಮ್ಮ ಮಗಳು ಉಳಿಯಲಿಲ್ಲ. ರಕ್ತ ಇಲ್ಲ, ರಕ್ತಸ್ರಾವ ಆಗುತ್ತಿದೆ ಎಂದು ಏನೂ ಹೇಳಲಿಲ್ಲ. ನಮಗೆ ನೋಡಲು ಕೂಡ ಬಿಡಲಿಲ್ಲ. ಹರಪನಹಳ್ಳಿ ತಾಲೂಕು ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಮಗಳು ಸಾವನಪ್ಪಿದ್ದಾಳೆ” ಎಂದು ಮೃತರ ತಾಯಿ ಹುಲಿಗೆಮ್ಮ ಆರೋಪಿಸಿದ್ದಾರೆ.