ಬೆಳಗಾವಿ: ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಮನೆ ಗೋಡೆ ಕುಸಿದು ಓರ್ವ ವೃದ್ಧೆ ಸಾವನ್ನಪ್ಪಿದ್ದರೆ, ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಆಟೋ ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ಚಾಲಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಮಣ್ಣಿನ ಗೋಡೆ ಕುಸಿದು ಫಕ್ಕೀರವ್ವ ಲಕ್ಷ್ಮಣ ಹಾವೇರಿ (65) ಎಂಬ ವೃದ್ಧೆ ಮೃತಪಟ್ಟಿದ್ದಾರೆ. ಮಣ್ಣಿನಲ್ಲಿ ಸಿಲುಕಿದ್ದ ಫಕ್ಕೀರವ್ವ ಅವರನ್ನು ಸ್ಥಳೀಯರು ಕೂಡಲೇ ಹೊರ ತೆಗೆದಿದ್ದಾರೆ. ಆದರೆ, ಅಷ್ಟರೊಳಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಮರಣೋತ್ತರ ಪರೀಕ್ಷೆಗೆ ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಗೋಕಾಕ್ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಟೋ ಚಾಲಕನ ರಕ್ಷಣೆ: ಅದೇ ರೀತಿ, ಯರಗಟ್ಟಿ ತಾಲೂಕಿನ ಚಿಕ್ಕಬೂದನೂರ ಗ್ರಾಮದ ಹೊರ ವಲಯದಲ್ಲಿ ನಿನ್ನೆ ರಾತ್ರಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಆಟೋ ದಾಟಿಸುವಾಗ ನೀರಿನ ರಭಸಕ್ಕೆ ಆಟೋ ಸಮೇತ ಚಾಲಕ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ, ಕೂಡಲೇ ಗ್ರಾಮಸ್ಥರು ಹಗ್ಗ ಹರಿ ಬಿಟ್ಟು ಚಾಲಕನನ್ನು ರಕ್ಷಿಸಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಒಂದು ಜೀವ ಬದುಕಿತು. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.