ಮಂಗಳೂರು(ದಕ್ಷಿಣ ಕನ್ನಡ): ಕೋಮು ವೈಷಮ್ಯ ಪ್ರಕರಣ ತಡೆಯಲು ಮಂಗಳೂರನ್ನು ಕೇಂದ್ರೀಕರಿಸಿ ದಕ್ಷಿಣ ಕನ್ನಡ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಲು ಸ್ಪೆಷಲ್ ಆ್ಯಕ್ಷನ್ ಫೋರ್ಸ್ (ಎಸ್ಎಎಫ್ ) ಸ್ಥಾಪಿಸಲಾಗಿದ್ದು, ಇಂದಿನಿಂದ ಕಾರ್ಯಾರಂಭ ಮಾಡುತ್ತದೆ. ಈ ಎಸ್ಎಎಫ್ ತಂಡಕ್ಕೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಇಂದು ಮಂಗಳೂರಿನಲ್ಲಿ ಚಾಲನೆ ನೀಡಿದ್ದು, ಇದು ಕೋಮು ವೈಷಮ್ಯ ತಡೆಯಲು ದೇಶದಲ್ಲೇ ಮೊದಲ ಬಾರಿಗೆ ಸ್ಥಾಪಿಸಲಾದ ಸಂಸ್ಥೆಯಾಗಿದೆ.
ದಕ್ಷಿಣ ಕನ್ನಡ , ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕೋಮು ದ್ವೇಷದ ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯದಿಂದ ಸರಣಿ ಹತ್ಯೆಗಳು ನಡೆಯುತ್ತಿವೆ. ಕೋಮು ವೈಷಮ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಭಯದಿಂದ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಎಸ್ಎಎಫ್ ಸ್ಥಾಪಿಸಿ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಕೋಮು ವೈಷಮ್ಯ ತಡೆಯಲು ಪೋರ್ಸ್ ಸ್ಥಾಪನೆ ಮಾಡುತ್ತಿರುವುದು ದೇಶದಲ್ಲೇ ಪ್ರಥಮ. ಕೋಮು ವೈಷಮ್ಯ ಪ್ರಕರಣಗಳು ನಡೆದಾಗ ವಿವಿಧ ರೀತಿಯಲ್ಲಿ ಇದನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೆವು. ಆದರೆ ಅದರಿಂದ ಕೋಮು ವೈಷಮ್ಯ ಪ್ರಕರಣಗಳು ತಡೆಯುತ್ತಿಲ್ಲ ಎಂಬುದನ್ನು ಅರಿತು ಎಸ್ಎಎಫ್ ಸ್ಥಾಪಿಸಿ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
ಎಎನ್ಎಫ್ ನಿಂದ ಎಸ್ಎಎಫ್ಗೆ ಸಿಬ್ಬಂದಿಗಳು: ಕಾರ್ಕಳದಲ್ಲಿ ಕೇಂದ್ರ ಸ್ಥಾನದಲ್ಲಿರುವ ನಕ್ಸಲ್ ನಿಗ್ರಹ ದಳ ( ಎಎನ್ಎಫ್ ) ದ 656 ಸಿಬ್ಬಂದಿಗಳಲ್ಲಿ 248 ಸಿಬ್ಬಂದಿಗಳನ್ನು ಎಸ್ಎಎಫ್ಗೆ ನಿಯೋಜಿಸಲಾಗಿದೆ. ಇದರಲ್ಲಿ ಡಿಐಜಿಪಿ 1, ಡಿವೈಎಸ್ಪಿ ಸಿವಿಲ್ 1, ಸಹಾಯಕ ಕಮಾಂಡೆಂಟ್ 1, ಪಿಐ/ ಆರ್ಪಿಐ 4, ಪಿಎಸ್ಐ/ ಆರ್ಎಸ್ಐ/ ಎಸ್ಐ 16, ಸಿಹೆಚ್ಸಿ 60 , ಸಿಪಿಸಿ/ಎಪಿಸಿ 150, ಅನುಯಾಯಿ 15 ಮಂದಿ ಇರಲಿದ್ದಾರೆ. ಇದರಲ್ಲಿ ಮಂಗಳೂರು ಕೇಂದ್ರ ಸ್ಥಾನದಲ್ಲಿ ಡಿಐಜಿಪಿ 1, ಎಸ್ಪಿ 1, ಡಿವೈಎಸ್ಪಿ 1, ಸಹಾಯಕ ಕಮಾಂಡೆಂಟ್ 1, ಪಿಐ/ಆರ್ಪಿಐ 1, ಪಿಎಸ್ಐ, ಆರ್ಎಸ್ಐ, ಎಸ್ಐ 1, ಸಿಹೆಚ್ಸಿ 3 , ಪಿಸಿಪಿ, ಎಪಿಸಿ 6 ಇದ್ದು, ಒಟ್ಟು 15 ಮಂದಿ ಇರಲಿದ್ದಾರೆ. ಇನ್ನು ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗೆ ತಲಾ ಒಂದು ಪಿಐ/ ಆರ್ಪಿಐ, 5 ಪಿಎಸ್ಐ / ಆರ್ಎಸ್ಐ / ಎಸ್ಐ, 19 ಸಿಹೆಚ್ಸಿ , 48 ಸಿಪಿಸಿ/ಎಪಿಸಿ ಮತ್ತು 5 ಅನುಯಾಯಿ ಇರಲಿದ್ದಾರೆ. ಮೂರು ಜಿಲ್ಲೆಗೂ ತಲಾ 78 ಸಿಬ್ಬಂದಿಗಳು ಇರಲಿದ್ದಾರೆ.
ಮಂಗಳೂರಿನಲ್ಲಿ ಕೇಂದ್ರ ಕಚೇರಿ: ಮಂಗಳೂರಿನ ನಗರ ಪೊಲೀಸ್ ಕಮಿಷನರೇಟ್ ಕಚೇರಿಯ ಹಿಂಭಾಗದಲ್ಲಿರುವ ಮೈದಾನದ ಬಳಿ ಎಸ್ಎಎಫ್ಗೆ ಕಚೇರಿ ತೆರೆಯಲಾಗಿದೆ. ಈ ಕಚೇರಿಯನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಗೃಹ ಸಚಿವ ಜಿ ಪರಮೇಶ್ವರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.