ದಾವಣಗೆರೆ: ನಗರದಲ್ಲಿ ಶಾಲಾ ಮಕ್ಕಳನ್ನು ಸಾಮರ್ಥ್ಯಕ್ಕಿಂತ ಅಧಿಕ ಸಂಖ್ಯೆಯಲ್ಲಿ ಆಟೋ, ವ್ಯಾನ್ಗಳಲ್ಲಿ ಶಾಲೆ ಕರೆದೊಯ್ಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಅಪಾಯಕಾರಿ ಆಗಿದೆ. ಇದನ್ನು ಮನಗಂಡ ದಾವಣಗೆರೆ ಸಂಚಾರಿ ಪೊಲೀಸರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಖುದ್ದು ಎಸ್ಪಿ ಉಮಾಪ್ರಶಾಂತ್ ಅವರೇ ತಮ್ಮ ಸಿಬ್ಬಂದಿಯೊಂದಿಗೆ ವಿಶೇಷ ಕಾರ್ಯಾಚರಣೆಗಿಳಿದಿದ್ದಾರೆ. ದಾವಣಗೆರೆ ನಗರಾದ್ಯಂತ ಪ್ರಮುಖ ವೃತ್ತಗಳಲ್ಲಿ ಸಂಚಾರಿ ಠಾಣೆಗಳ ಪೊಲೀಸರು, ನಿಯಮ ಉಲ್ಲಂಘಿಸುವವರ ಬಲೆಗೆ ಕಾದು ಕೂತಿದ್ದಾರೆ.
ಶಾಲೆಯಿಂದ ಮನೆಗೆ, ಮನೆಯಿಂದ ಶಾಲೆಗೆ ಮಕ್ಕಳನ್ನು ಕರೆದೊಯ್ಯುವಾಗ ನಿಯಮ ಉಲ್ಲಂಘಿಸುವ ಆಟೋ, ವ್ಯಾನ್ ಚಾಲಕರಿಗೆ ಈಗಾಗಲೇ ಪೊಲೀಸರು ದಂಡ ಸಹಿತ ಪ್ರಕರಣ ದಾಖಲು ಮಾಡಿ ಬಿಸಿ ಮುಟ್ಟಿಸುತ್ತಿದ್ದಾರೆ.
105 ಪ್ರಕರಣ ದಾಖಲು: ಹೆಚ್ಚಿನ ಸಂಖ್ಯೆಯ ಶಾಲಾ ಮಕ್ಕಳೊಂದಿಗೆ ಆಟೋ ಓಡಿಸುವವರ ವಿರುದ್ಧ ಈಗಾಗಲೇ 105 ಪ್ರಕರಣಗಳನ್ನು ದಾಖಲಿಸಲಾಗಿದೆ. ಜೊತೆಗೆ 20,600 ರೂ, ದಂಡ ವಿಧಿಸಲಾಗಿದೆ ಎಂದು ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದಾರೆ.ಶಾಲಾ ಮಕ್ಕಳ ಸುರಕ್ಷತೆಗಾಗಿ ಕ್ರಮ: ಶಾಲಾ ಮಕ್ಕಳ ಸುರಕ್ಷತೆಯಿಂದ ಸಂಚಾರಿ ಪೊಲೀಸರು ಈ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆಟೋ ಮುಂದೆ ಹಾಗೂ ಹಿಂದೆ ಸಾಮರ್ಥ್ಯಕ್ಕಿಂತ ಹೆಚ್ಚು ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಬಾರದು. ನಿಯಮ ಮೀರಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಎಚ್ಚರಿಕೆ ಮೀರಿ ನಿಯಮ ಉಲ್ಲಂಘಿಸುವವರ ವಾಹನ ಸೀಜ್ ಮಾಡುವುದಾಗಿ ಎಸ್ಪಿ ವಾರ್ನಿಂಗ್ ಮಾಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ಸಂಚಾರ ನಿಯಮಗಳನ್ನು ಪಾಲಿಸಲು ಜಾಗೃತಿ ಮೂಡಿಸಲಾಗುತ್ತಿದೆ.
Laxmi News 24×7