ಬೆಂಗಳೂರು: ಕೃಷ್ಣ ರಾಜ ಸಾಗರ ಜಲಾಶಯ (ಕೆಆರ್ಎಸ್)ದ ಸುತ್ತಮುತ್ತಲಿನ 20 ಕಿಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಸ್ಫೋಟದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಎಷ್ಟು ಸಮಯಬೇಕು ಎಂಬ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಿಂದ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಸಿ.ಜಿ.ಕುಮಾರ್ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, 2024ರ ಜನವರಿಯಂದು ನ್ಯಾಯಾಲಯ ಜಲಾಶಯದ ಸುತ್ತಮುತ್ತಲಿನ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ಸ್ಫೋಟದಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಗೆ ನಿರ್ದೇಶನ ನೀಡಿದ್ದರೂ ಈವರೆಗೆ ವೈಜ್ಞಾನಿಕ ಅಧ್ಯಯನ ನಡೆಸಿಲ್ಲ ಎಂದು ಹೇಳಿದರು.
ಇದಕ್ಕೆ ಸರ್ಕಾರದ ಪರ ವಕೀಲರು, ಆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಒದಗಿಸಲು ಸ್ವಲ್ಪ ಸಮಯಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ನ್ಯಾಯಾಲಯ, ನೀವು ಐಐಎಸ್ಸಿಯಿಂದ ಅಧ್ಯಯನಕ್ಕೆ ಎಷ್ಟು ಸಮಯ ಬೇಕಾಗುತ್ತದೆ? ಯಾವ ಸಮಯ ಒಳ್ಳೆಯದು ಎಂಬ ಬಗ್ಗೆ ಮಾಹಿತಿ ಪಡೆದು ಸಲ್ಲಿಸಲು ಮೌಖಿಕವಾಗಿ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.
Laxmi News 24×7