ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಆರ್ಸಿಬಿ ತಂಡದ ಸರ್ಕಾರಿ ಸನ್ಮಾನ ಕಾರ್ಯಕ್ರಮದ ವೇದಿಕೆಯಲ್ಲೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ನಲ್ಲಿ ಹಾಕಲಾದ ವೇದಿಕೆ ಮೇಲೆ 25-30 ಅತಿಥಿಗಳಿಗೆ ಮಾತ್ರ ಅನುಮತಿಸಲಾಗಿದ್ದರೂ, ನೂರಾರು ಜನ ವೇದಿಕೆಯಲ್ಲಿ ಜಮಾವಣೆಯಾಗುವ ಮೂಲಕ ಲೋಪ ಎಸಗಲಾಗಿತ್ತು ಎಂದು ತಿಳಿದು ಬಂದಿದೆ.
ವಿಧಾನಸೌಧ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೇವಲ 25-30 ಮಂದಿ ಅಥಿತಿಗಳಿಗೆ ಮಾತ್ರ ವೇದಿಕೆ ಮೇಲೆ ಅನುಮತಿಸಿ ವಿಧಾನಸೌಧ ಭದ್ರತೆ ಪೊಲೀಸ್ ಇನ್ಸ್ಪೆಕ್ಟರ್ಗೆ ಸೂಚನೆ ನೀಡಿತ್ತು. ಲೋಕೋಪಯೋಗಿ ಇಲಾಖೆ ಜೂ. 4ರಂದು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ “ಟಾಟಾ ಐಪಿಎಲ್ 2025ರ ವಿಜೇತ ತಂಡ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನಾ ಸಮಾರಂಭ’ದ ಕಾರ್ಯಕ್ರಮ ನಡೆಸಲು ಅಳವಡಿಸಿರುವ ವೇದಿಕೆ ಪರಿಶೀಲನೆ ಮಾಡಿ ವರದಿ ನೀಡಿತ್ತು.
ಪರಿಶೀಲಿಸಿ ಪ್ರಮಾಣಪತ್ರ ನೀಡಲು ಕೋರಿಕೆ: 4.06.2025ರಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮುಂಭಾಗ ನಡೆಯಲಿರುವ “ಟಾಟಾ ಐಪಿಎಲ್ 2025ರ ವಿಜೇತ ತಂಡವಾದ ರಾಯಲ್ ಚಾಲೇಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನಾ ಸಮಾರಂಭ’ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರು ಮತ್ತು ಗಣ್ಯವ್ಯಕ್ತಿಗಳು ಭಾಗವಹಿಸಲು ಯೋಗ್ಯವಿರುವ ಬಗ್ಗೆ ವೇದಿಕೆಯನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಲು ವಿಧಾನಸೌಧ ಭದ್ರತೆ ಪೊಲೀಸ್ ಇನ್ಸ್ಪೆಕ್ಟರ್ ವಿಧಾನಸೌಧ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗೆ ಕೋರಿದ್ದರು.
ಕೆಲ ನಿಬಂಧನೆಗಳನ್ನು ಹೇರಲಾಗಿತ್ತು: ವೇದಿಕೆಯ ಅಳತೆ 60’0″x20’0″ ಅಡಿಗಳಿದ್ದು, ವೇದಿಕೆ ನಿರ್ಮಿಸಿರುವುದನ್ನು ಪರಿಶೀಲಿಸಲಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ವೇದಿಕೆಯ ಮೇಲೆ ಗರಿಷ್ಠ 25 ರಿಂದ 30 ಜನ ಅತಿಥಿಗಳು ಆಸೀನರಾಗಿ ವೇದಿಕೆಯ ಆಯೋಜಕರನ್ನೊಳಗೊಂಡಂತೆ ಕಾರ್ಯಕ್ರಮ ನಡೆಸಬಹುದೆಂದು ಕೆಲ ನಿಬಂಧನೆಗಳನ್ವಯ ವೇದಿಕೆ ಉಪಯೋಗಿಸಲು ದೃಢೀಕರಣ ನೀಡಿತ್ತು.
ಅನುಮತಿ ಪತ್ರದಲ್ಲಿ ಕಾರ್ಯಕ್ರಮಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ನೀಡಲಾದ ಅನುಮತಿ ಪತ್ರದಲ್ಲಿನ ಷರತ್ತು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.ವೇದಿಕೆಯನ್ನು ದೃಢೀಕರಿಸಿದ ನಂತರ ವೇದಿಕೆಯ ಮೇಲೆ ಯಾವುದೇ ಬದಲಾವಣೆ ಕೈಗೊಂಡಲ್ಲಿ, ಸದರಿ ಬದಲಾವಣೆಗೆ ಲೋಕೋಪಯೋಗಿ ಇಲಾಖೆಯಿಂದ ದೃಢೀಕರಿಸಿಕೊಳ್ಳುವಂತೆ ಕೆಲ ನಿಬಂಧನೆಗಳನ್ನು ಹೇರಲಾಗಿತ್ತು.
ವೇದಿಕೆ ಮೇಲೆ ನೂರಕ್ಕೂ ಅಧಿಕ ಅತಿಥಿಗಳ ಜಮಾವಣೆ: ವೇದಿಕೆ ಮೇಲೆ ಅನುಮತಿಸಿದ 25-30 ಜನರ ಮಿತಿ ಮೀರಿ ಸುಮಾರು 200ಕ್ಕೂ ಅಧಿಕ ಜನರು ಜಮಾವಣೆಯಾಗಿದ್ದರು. ವೇದಿಕೆ ಮೇಲೆ ಆರ್ ಸಿಬಿ ತಂಡದ ಸದಸ್ಯರ ಸನ್ಮಾನ ವೇಳೆ ಅವರ ಜೊತೆ ಫೊಟೋ, ಸೆಲ್ಫಿ ಕ್ಲಿಕ್ಕಿಸಲು ಸಚಿವರು, ಶಾಸಕರು, ಅವರ ಕುಟುಂಬಸ್ಥರು, ಮಕ್ಕಳು, ಸೇರಿ ನೂರಾರು ಜನರು ಜಮಾವಣೆಯಾಗಿದ್ದರು. ಸನ್ಮಾನ ವೇದಿಕೆಯಲ್ಲಿ ಜನ ಸಂದಣಿಯೇ ಏರ್ಪಟ್ಟಿತ್ತು ಎಂದು ತಿಳಿದು ಬಂದಿದೆ.