ಶೋಭಾ ಕರಂದ್ಲಾಜೆ ಆಯ್ಕೆ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಆಯ್ಕೆಯನ್ನು ರದ್ದು ಪಡಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ನಗರದ ನಂದಿನಿ ಲೇಔಟ್ ನಿವಾಸಿ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮತದಾರ ಬಿ. ಮೋಹನ್ ಕುಮಾರ್ ಎಂಬುವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಏಕ ಸದಸ್ಯ ಪೀಠ ಗುರುವಾರ ಪ್ರಕಟಿಸಿತು. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಲೋಕಸಭೆ ಚುನಾವಣೆ ವೇಳೆ ಶೋಭಾ ಕರಂದ್ಲಾಜೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರ (ಫಾರಂ 26)ದಲ್ಲಿ ಅಪೂರ್ಣ ಮಾಹಿತಿ ಕೊಟ್ಟಿದ್ದಾರೆ. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಮರೆಮಾಚಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 123(2) ಪ್ರಕಾರ ಚುನಾವಣಾ ಅಕ್ರಮವಾಗಲಿದೆ. ಆದ್ದರಿಂದ ಅವರ ಚುನಾವಣೆಯಲ್ಲಿ ಆಯ್ಕೆಯಾಗಿರುವ ಕ್ರಮವನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.