ದಾವಣಗೆರೆ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳ ದಾಖಲಾತಿ ಕಡಿಮೆ ಇರುವ ನೆಪ ನೀಡಿ ಶಿಕ್ಷಣ ಇಲಾಖೆ ಶಾಲೆಗಳಿಗೆ ಬೀಗ ಹಾಕುತ್ತಿದೆ. ಆದರೆ, ಇಲ್ಲೊಂದು ಮುಚ್ಚಿದ್ದ ಸರ್ಕಾರಿ ಶಾಲೆ 16 ವರ್ಷಗಳ ಬಳಿಕ ಮತ್ತೆ ತೆರೆದಿದೆ.
ಊರಿನಲ್ಲಿಯೇ ಶಾಲೆ ಇದ್ದರೂ ಮಕ್ಕಳು ದೂರದೂರಿಗೆ ನಡೆದುಕೊಂಡೇ ತೆರಳಿ ಶಾಲೆ ಸೇರುವ ಪರಿಸ್ಥಿತಿ ಇಲ್ಲಿತ್ತು. ಮಕ್ಕಳ ಕಷ್ಟ ನೋಡಲಾಗದೆ ಗ್ರಾಮಸ್ಥರು ಈ ಶಾಲೆಯನ್ನು ಮತ್ತೆ ತೆರೆಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆ ಸ್ವಚ್ಛಗೊಳಿಸಿ, ಸಿಂಗರಿಸಿ 16 ವರ್ಷಗಳ ಬಳಿಕ ತೆರೆಯುವಂತೆ ಮಾಡಿದ್ದಾರೆ. ಬಂದ್ ಆಗಿದ್ದ ಶಾಲೆಯಲ್ಲಿ ಇದೀಗ ಆಟ, ಪಾಠ, ಓಟ ಸೇರಿದಂತೆ ಎಲ್ಲಾ ಚಟುವಟಿಕೆಗಳೂ ಶುರುವಾಗಿವೆ. ಚಿಣ್ಣರು ಖುಷಿ ಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. 13 ಮಕ್ಕಳು ಶಾಲೆ ಸೇರಿದ್ದು, ಪಾಠ ಮಾಡಲು ಒಬ್ಬ ಶಿಕ್ಷಕಿಯನ್ನು ಶಿಕ್ಷಣ ಇಲಾಖೆ ನಿಯೋಜಿಸಿದೆ.ಇದು ನರಗನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಓಬಣ್ಣನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ. ಪಾಠ, ಪ್ರವಚನಗಳಿಲ್ಲದೆ ಮಂಕಾಗಿದ್ದ ಈ ಶಾಲೆ ಇದೀಗ ಮಕ್ಕಳನ್ನು ಕೈಬೀಸಿ ಕರೆಯುತ್ತಿದೆ. ಕೂಲಿ ಕಾರ್ಮಿಕರೇ ಹೆಚ್ಚಿರುವ ಗ್ರಾಮದಲ್ಲಿ ಸ್ಥಳೀಯರ ಒತ್ತಾಸೆಯಂತೆ ಕೇವಲ ಹತ್ತೇ ದಿನದಲ್ಲಿ ಶಾಲೆ ಸ್ವಚ್ಛಗೊಂಡು, ಉತ್ತರ ವಲಯದ ಬಿಇಒ ಷೇರ್ ಅಲಿ ಅವರು ಶಾಲೆಗೆ ಚಾಲನೆ ನೀಡಿದ್ದಾರೆ.
Laxmi News 24×7