Breaking News

ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲು ಟಾಸ್ಕ್ ಫೋರ್ಸ್ ರಚನೆ: ಆರ್‌.ಅಶೋಕ್

Spread the love

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಾಸ್ಕ್‌ ಫೋರ್ಸ್‌ ಮಾಡಿ, ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಕೋಮುವಾದದ ವಿರುದ್ಧ ಅಲ್ಲ, ಹಿಂದೂಗಳ ವಿರುದ್ಧ ಇರುವ ಫೋರ್ಸ್‌ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಘಟನೆ ನಡೆದು ಎಷ್ಟೋ ದಿನಗಳಾದ ನಂತರ ಪ್ರಕರಣ ದಾಖಲಿಸಲಾಗುತ್ತಿದೆ. ಸುಳ್ಳು ಆಪಾದನೆ ಮಾಡಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದರೆ, ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಕಾಂಗ್ರೆಸ್‌ ಪಕ್ಷದಿಂದ ಕರಾವಳಿ ಭಾಗಕ್ಕೆ ಹಣ ಬರುತ್ತಿಲ್ಲ. ಕಾಂಗ್ರೆಸ್‌ನ ಭಿಕ್ಷೆಯಿಂದ ಅಲ್ಲಿನ ಜನರು ಬದುಕುತ್ತಿಲ್ಲ. ಜನರ ಹಣದಲ್ಲೇ ಕಾಂಗ್ರೆಸ್‌ ನಾಯಕರು ಬದುಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಕರಾವಳಿ ಜನರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.

ಹೇಮಾವತಿ ನೀರು ಹಂಚಿಕೆ ವಿಚಾರ- ಸರ್ವಪಕ್ಷ ಸಭೆ ಕರೆಯಲು ಒತ್ತಾಯ: ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರ ಎಲ್ಲ ರೈತರನ್ನು ಹಾಗೂ ಸರ್ವಪಕ್ಷಗಳ ಪ್ರಮುಖರನ್ನು ಕರೆದು ಸಭೆ ಮಾಡಿ ಚರ್ಚಿಸಬೇಕು. ರೈತರ ವಿರುದ್ಧ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯಬೇಕು. ಮಾಗಡಿಗೆ ಹೇಮಾವತಿ ನೀರು ನೀಡಲು ತುಮಕೂರಿನ ರೈತರು ಪ್ರತಿಭಟಿಸುತ್ತಿರುವಾಗ, ಎರಡೂ ಜಿಲ್ಲೆಗಳ ಪ್ರತಿನಿಧಿಗಳು ಹಾಗೂ ರೈತರ ಜೊತೆ ಸರ್ಕಾರ ಚರ್ಚಿಸಬೇಕಿತ್ತು. ಈ ಕೆಲಸವನ್ನು ಸರ್ಕಾರ ಮಾಡದೆಯೇ ರೈತರ ನಡುವೆಯೇ ಎತ್ತಿ ಕಟ್ಟುವ ಕೆಲಸ ಮಾಡಿದೆ. ರೈತರಿಗೆ ಮನವರಿಕೆ ಮಾಡುವ ಬದಲು ಬೆದರಿಕೆ ಹಾಕುವುದು ಒಳ್ಳೆಯದಲ್ಲ. ಎಲ್ಲ ರೈತರನ್ನು ಸಮಭಾವದಿಂದ ನೋಡಬೇಕೆ ಹೊರತು, ಮಠಾಧೀಶರ ಮೇಲೆ, ಜನಪ್ರತಿನಿಧಿಗಳ ಮೇಲೆ ಕೇಸು ಹಾಕಬಾರದು. ಕಾಂಗ್ರೆಸ್‌ನ ಶಾಸಕರೇ ಆದ ಗುಬ್ಬಿ ಶ್ರೀನಿವಾಸ್‌ ಕೂಡ ಇದರ ವಿರುದ್ಧ ನಿಂತಿದ್ದಾರೆ ಎಂದರು.

ರೈತರ ವಿರುದ್ಧ ಪ್ರಕರಣ ಅಕ್ಷಮ್ಯ ಅಪರಾಧ: ರೈತರ ವಿರುದ್ಧ ಪ್ರಕರಣ ದಾಖಲಿಸುವುದು ಅಕ್ಷಮ್ಯ ಅಪರಾಧ. ರೈತರ ಜೊತೆಗೆ ಚರ್ಚಿಸಿ ಸಮನ್ವಯ ಸಾಧಿಸಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಕುರ್ಚಿ ಹೋದರೆ ಅಧಿಕಾರವೇ ಇರುವುದಿಲ್ಲ. ರಾಜ್ಯ ಸರ್ಕಾರ ಎರಡು ಜಿಲ್ಲೆಗಳ ಸರ್ವಪಕ್ಷ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು, ಕೇಸುಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ