ಮಹಾರಾಷ್ಟ್ರ, ಜೂನ್ 1 : ಹೆರಿಗೆ (Childbirth) ಎನ್ನುವುದು ಹೆಣ್ಣಿಗೆ ಮರುಹುಟ್ಟು ಇದ್ದಂತೆ. ಮಗುವಿಗೆ ಜನ್ಮ ನೀಡುವುದು ಹೆಣ್ಣಿಗೆ ಹುಟ್ಟು ಸಾವಿನ ನಡುವಿನ ಹೋರಾಟ. ಹೀಗಾಗಿ ಈ ಸಮಯದಲ್ಲಿ ಆಕೆ ಅನುಭವಿಸುವ ನೋವನ್ನು ಹೇಳಲು ಅಸಾಧ್ಯ. ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಬರುವುದೇ ಇಲ್ಲ.
ಹೀಗಾಗಿ ಮಾರ್ಗ ಮಧ್ಯದಲ್ಲೇ ಹೆರಿಗೆ ಆಗುವುದಿದೆ. ಆದರೆ ಇದೀಗ ಆರೋಗ್ಯ ಸೌಲಭ್ಯದ ಕೊರತೆಯಿಂದ ಆದಿವಾಸಿ ಮಹಿಳೆಯೊಬ್ಬರು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆಯೂ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ (Jalgaon district of Maharashtra) ಯಲ್ಲಿ ನಡೆದಿದೆ ಎನ್ನಲಾಗಿದೆ.
ರಸ್ತೆ ಮಧ್ಯದಲ್ಲೇ ಮಹಿಳೆಯರು ಈ ಮಹಿಳೆಗೆ ಹೆರಿಗೆ ಮಾಡಿಸಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.@theobserverpost ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ಮೂರ್ನಾಲ್ಕು ಮಹಿಳೆಯರು ಸೀರೆಯನ್ನು ಅಡ್ಡಲಾಗಿ ಹಿಡಿದು ರಸ್ತೆ ಬದಿಯಲ್ಲಿ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಈ ಆದಿವಾಸಿ ಮಹಿಳೆಯ ಗಂಡನು ಅಲ್ಲೇ ನಿಂತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು.