ಬೆಂಗಳೂರು: ಮೇ 31ಅನ್ನು ವಿಶ್ವ ತಂಬಾಕು ದಿನಾಚರಣೆಯಾಗಿ ಆಚರಿಸಲಾಯಿತು. ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಜೊತೆಗೆ ರಾಜ್ಯ ಸರ್ಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಸೇವನೆಗೂ ನಿಷೇಧ ವಿಧಿಸಿ ಅಧಿಸೂಚನೆ ಹೊರಡಿಸಿದೆ.
ಇಲ್ಲಿಯವರೆಗೆ ಸಿಗರೇಟು, ಬೀಡಿ ಸೇರಿದಂತೆ ಹೊಗೆಯುಕ್ತ ತಂಬಾಕು ಉತ್ಪನ್ನಗಳ ಸೇವನೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಿಸಲಾಗಿತ್ತು. ಈಗ ಹೊಗೆರಹಿತ ತಂಬಾಕು ಉತ್ಪನ್ನಗಳ ಬಳಕೆಯನ್ನೂ ಸಹ ರಾಜ್ಯ ಸರ್ಕಾರ ನಿಷೇಧಿಸಿದೆ. ಈ ಸಂಬಂಧ ಹೊಸ ಅಧಿಸೂಚನೆ ಹೊರಡಿಸಲಾಗಿದ್ದು ಈ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಹೊಗೆರಹಿತ ತಂಬಾಕು ಉತ್ಪನ್ನಗಳನ್ನು ಬಳಸುವಂತಿಲ್ಲ. ಅಡಿಕೆ ಎಲೆ ಜೊತೆಗೆ, ಗುಟ್ಕಾ ಪಾನ್ ಮಸಾಲ ಜೊತೆ ತಂಬಾಕನ್ನು ಸೇವಿಸಿ ರಸ್ತೆ, ಬೀದಿಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವಂತಿಲ್ಲ.
ವಿಶ್ವ ತಂಬಾಕು ರಹಿತ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ’ ರಕ್ಷಣೆಯತ್ತ ರಾಜ್ಯ ಸರ್ಕಾರದಿಂದ ಮಹತ್ವದ ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಬಳಕೆಯನ್ನು ನಿಷೇಧಿಸಲಾಗಿದೆ. COTPA ಕಾಯ್ದೆಗೆ ತಿದ್ದುಪಡಿ ತಂದು ಹೊಗೆ ರಹಿತ ತಂಬಾಕು ಪದಾರ್ಥಗಳಿಗೆ ಕಡಿವಾಣ ಹಾಕುವುದರೊಂದಿಗೆ ಹುಕ್ಕಾ ಬ್ಯಾನ್ ಮಾಡಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕ್ರಮಕ್ಕೆ ಇದೀಗ ರಾಷ್ಟ್ರಪತಿಗಳಿಂದ ಕೂಡ ಮನ್ನಣೆ ದೊರೆತಿದ್ದು, ಈಗ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದೆ.