ಬೆಳಗಾವಿ: ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಕೆಲಸ ಮುಗಿಸಿ, ಮನೆ ಕಡೆ ಹೊರಟಿದ್ದವರ ಮೇಲೆ ಎಣ್ಣೆ ಟ್ಯಾಂಕರ್ ಹರಿದು ಸ್ಥಳದಲ್ಲೇ ಮೂವರು ಸಾವನ್ನಪ್ಪಿ, ಟ್ಯಾಂಕರ್ ಚಾಲಕ ಸೇರಿ ನಾಲ್ವರಿಗೆ ಗಾಯವಾಗಿರುವ ದಾರುಣ ಘಟನೆ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿತು.
ಕಾರ್ಮಿಕರು ಇನ್ನೇನು ಮನೆ ಕಡೆ ಹೋಗಬೇಕು ಅನ್ನುವಷ್ಟರಲ್ಲಿ ಟ್ಯಾಂಕರ್ ರೂಪದಲ್ಲಿ ಬಂದ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ರಾಮಚಂದ್ರ ಜಾಧವ (45), ಇವರ ಪುತ್ರ ಮಹೇಶ ಜಾಧವ (18) ಹಾಗೂ ಮತ್ತೋರ್ವ ಕಾರ್ಮಿಕ ರಮೇಶ (38) ಮೃತಪಟ್ಟ ದುರ್ದೈವಿಗಳು.
ಭೀಮವ್ವ (55) ಎಂಬವರ ಎರಡು ಕಾಲುಗಳು ತುಂಡಾಗಿದ್ದು, ಲಕ್ಷ್ಮೀಬಾಯಿ ಜಾಧವ್ (38) ಹಾಗೂ ಅನುಶ್ರೀ (18) ಗಾಯಗೊಂಡಿದ್ದಾರೆ. ಮಂಗಳೂರು ಮೂಲದ ಲಾರಿ ಚಾಲಕ ದಿನೇಶ ಶೆಟ್ಟಿಗೂ (45) ಗಂಭೀರವಾದ ಗಾಯಗಳಾಗಿದೆ. ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಮೃತರು ಹಾಗೂ ಗಾಯಾಳುಗಳು ಕಲಬುರಗಿ ಮೂಲದವರಾಗಿದ್ದಾರೆ.
ಟ್ಯಾಂಕರ್ ಗೇರು ಬೀಜದ ಎಣ್ಣೆ ತುಂಬಿಕೊಂಡು ಹೊರಟಿತ್ತು. ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕರ ಮೇಲೆ ಹರಿದ ಬಳಿಕ ಸರ್ವೀಸ್ ರಸ್ತೆಯಲ್ಲಿ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಿತ್ತೂರು ಠಾಣೆ ಪೊಲೀಸರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.