ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಬೆಳೆದಂತೆಲ್ಲ, ಮಹಾನಗರ ಪಾಲಿಕೆಗೆ ಕಸ ಸಂಗ್ರಹಣೆ ಹಾಗೂ ಸಂಸ್ಕರಣೆ ದೊಡ್ಡ ತಲೆನೋವಾಗಿದೆ. ಅವಳಿ ನಗರದಲ್ಲಿ ನಿತ್ಯ ನೂರಾರು ಟನ್ ಕಸ ಸಂಗ್ರಹವಾಗುತ್ತಿದ್ದು, ವಿಲೇವಾರಿ ಮಾಡಲು ಪಾಲಿಕೆ ಹೊಸ ಉಪಾಯಕ್ಕೆ ಕೈ ಹಾಕಿದೆ.
ಅಂದಿನ ಕಸ ಅಂದೇ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಲು ಹು-ಧಾ ಪಾಲಿಕೆ ನಿರ್ಧರಿಸಿದೆ. ಇದು ಮೊದಲ ಪ್ರಯತ್ನವಾಗಿದೆ.
ಅವಳಿ ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಯೇ ಇಲ್ಲ. ಹೀಗಾಗಿ ರಾಶಿ ಕಸದ ಗುಡ್ಡೆ ಹಾಕಲಾಗಿದೆ. ಎಷ್ಟೋ ದಶಕಗಳಿಂದ ಕಸದ ಬೆಟ್ಟ ಕರಗಿಸಲು ಸಾಧ್ಯವಾಗದೇ ಅದನ್ನು ಬಯೋ ಮೈನಿಂಗ್ ಮಾಡಲಾಗುತ್ತಿದ್ದರೂ, ಅತ್ತ ಧಾರವಾಡದ ಹೊಸ ಯಲ್ಲಾಪುರ ಹಾಗೂ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ರಾಶಿ ರಾಶಿ ಕಸ ಸಂಗ್ರಹವಾಗಿದೆ. ದಶಕಗಳಿಂದ ಇದು ಸಂಗ್ರಹವಾಗಿರುವುದು. ಇದೀಗ ಇದನ್ನು ಬಯೋ ಮೈನಿಂಗ್ ಮೂಲಕ ಕರಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದರಲ್ಲಿ ಅಲ್ಪಸ್ವಲ್ಪ ಯಶಸ್ವಿ ಕೂಡ ಆಗುತ್ತಿದೆ.
ಈ ನಡುವೆ ಪ್ರತಿನಿತ್ಯ ಹುಬ್ಬಳ್ಳಿಯಲ್ಲಿ 300 ಟನ್ ಹಾಗೂ ಧಾರವಾಡದಲ್ಲಿ 150 ಟನ್ ಅಂದರೆ 450ರಿಂದ 500 ಟನ್ ಕಸ ಸಂಗ್ರಹವಾಗುತ್ತದೆ. ಇದು ಮಹಾನಗರ ಪಾಲಿಕೆಗೆ ದೊಡ್ಡ ತಲೆನೋವಾಗಿದೆ.