ಹಾಸನ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತವಾಗಿರುವ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಶ್ರೇಯಸ್ ಪಟೇಲ್, ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಸುಗಮ ಸಂಚಾರಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಎರಡು ಕಿ.ಮೀ ರಸ್ತೆ ಕಾಮಗಾರಿಗೆ ಭೂಕುಸಿತವೇ ದೊಡ್ಡ ಸವಾಲಾಗಿದೆ. ತಡೆಗೊಡೆ ಕಟ್ಟಿರುವ ಕೆಲವು ಕಡೆಗಳಲ್ಲಿ ಮಣ್ಣು ಕುಸಿದಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಜವಾಬ್ದಾರಿಯುತವಾಗಿ ಕೆಲಸ ನಿರ್ವಹಣೆ ಮಾಡುವಂತೆ ಎನ್.ಹೆಚ್.ಎ.ಐ ಅಧಿಕಾರಿಗಳಿಗೆ ಸೂಚಿಸಿದರು.ಈ ಬಾರಿಯೂ ಭೂ ಕುಸಿತ ಉಂಟಾಗಿದೆ.
ಆದರೆ, ಕಳೆದ ಬಾರಿ ಮುಂಜಾಗ್ರತಾ ಕ್ರಮವನ್ನು ಕೈಕೊಂಡಿದ್ದರಿಂದ ಆನೆಮಹಲ್ ಹಾಗೂ ಮತ್ತಿತರ ಸ್ಥಳಗಳಲ್ಲಿ ಸ್ವಲ್ಪ ಭೂ ಕುಸಿತ ಉಂಟಾಗುತ್ತಿರುವುದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.ನಾವು ಕಳೆದ ಬಾರಿ ಭೇಟಿ ನೀಡಿದಾಗ ಹಾಗೂ ಇಂದು ಭೇಟಿ ನೀಡಿ ನೋಡಿದಾಗ ಸಾಕಷ್ಟು ಕೆಲಸಗಳಾಗಿವೆ.
ಅಲ್ಲಲ್ಲಿ ಮಣ್ಣು ಬಹಳ ತೇವಾಂಶಯುತವಾಗಿರುವುದರಿಂದ ಕುಸಿತ ಉಂಟಾಗುತ್ತಿದೆ. ಹೆದ್ದಾರಿಯ ಬಲಭಾಗದಲ್ಲಿ ರಸ್ತೆ ಸಂಚಾರಕ್ಕೆ ದಾರಿ ಮಾಡಿಕೊಡುತ್ತೇವೆ. ಒಟ್ಟಾರೆಯಾಗಿ ಸಾರ್ವಜನಿಕರಿಗೆ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುತ್ತೇವೆ ಎಂದರು.