ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸಮೀಪದ ನಾರಾಯಣ ಹೆಲ್ತ್ ಸಿಟಿ ವೈದ್ಯರ ತಂಡದಿಂದ ಮತ್ತೊಂದು ಜೀವಂತ ಹೃದಯ ರವಾನೆ ಮತ್ತು ಜೀವಂತ ಹೃದಯ ಕಸಿ ಶಸ್ತ್ರ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು, ನಾರಾಯಣ ಹೆಲ್ತ್ ಸಿಟಿ ಹೃದ್ರೋಗ ತಜ್ಞರಾದ ಡಾ ಭಗೀರಥ್ ಮತ್ತು ವರುಣ್ ಶೆಟ್ಟಿ ತಂಡದಿಂದ ಬೆಂಗಳೂರು ಮೂಲದ ಸುಮಾರು 42 ವರ್ಷ ವಯಸ್ಸಿನ ವ್ಯಕ್ತಿಗೆ ಯಶಸ್ವಿಯಾಗಿ ಹೃದಯ ಕಸಿ ನಡೆಸಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಬೆಂಗಳೂರು ಮೂಲದ ಈ ವ್ಯಕ್ತಿ ಹಲವು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೊತೆಗೆ ಹಾರ್ಟ್ ಟ್ರಾನ್ಸ್ಪ್ಲಾಂಟ್ಗಾಗಿ ಹೆಸರು ನೋಂದಾಯಿಸಿಕೊಂಡಿದ್ದರು ಎನ್ನಲಾಗಿದೆ. ಈ ನಡುವೆ ಬೆಂಗಳೂರು ಮೂಲದ ಸುಮಾರು 58 ವರ್ಷದ ಸುರೇಂದ್ರ ಬಾಬು ಎಂಬ ವ್ಯಕ್ತಿ ಅಂಗಾಂಗ ದಾನ ಮಾಡಿದ್ದು, ಅವುಗಳಲ್ಲಿ ಹೃದಯ ಹೊಂದಾಣಿಕೆ ಆಗಿದ್ದರಿಂದ ಇಂದು ನಗರದ ಎಸ್ಟರ್ ಆರ್ ವಿ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ರವಾನೆ ಮಾಡಿ ನಾರಾಯಣ ಹೆಲ್ತ್ ಸಿಟಿಯಲ್ಲಿ ಯಶಸ್ವಿಯಾಗಿ ಜೀವಂತ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.