ಮೈಸೂರು : ಸಿದ್ದರಾಮಯ್ಯ ಅವರು ಸಿಎಂ ಆಗಿ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರದ ಜೊತೆ ಸಂಘರ್ಷದ ಹಾದಿ ತುಳಿದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದರು.
ನೀತಿ ಆಯೋಗದ ಸಭೆಗೆ ಸಿಎಂ ಹಾಗೂ ಸಂಬಂಧಿಸಿದವರು ಗೈರಾಗಿದ್ದ ವಿಚಾರವಾಗಿ ಭಾನುವಾರ ಮಾಧ್ಯಮಗಳಿಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ಪ್ರತಿಕ್ರಿಯೆ ನೀಡಿದರು.
ಸಭೆಗೆ ಗೈರಾಗಿದ್ದ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ತಿಳಿಸಬೇಕು. ಸಭೆಗೆ ಗೈರಾಗುವ ಮೂಲಕ ರಾಜ್ಯದ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ಭಾಗವಹಿಸಿದ್ದರು. ಆದರೆ ನಮ್ಮ ಸಿಎಂ ಸಭೆ ಯಾಕೆ ಬಹಿಷ್ಕಾರ ಮಾಡಿದರು ಎಂಬುವುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ. ಆದರೆ ಪ್ರಧಾನ ಮಂತ್ರಿಗಳು ಕರೆದ ಸಭೆಗೆ ಗೈರಾಗುತ್ತಾರೆ. ರಾಜಕಾರಣ ಮಾಡುವುದೇ ರಾಜ್ಯ ಸರ್ಕಾರದ ಆದ್ಯತೆಯಾಗಿದೆ. ನೀತಿ ಆಯೋಗದ ಸಭೆಗೆ ಗೈರಾಗಿದ್ದು, ರಾಜ್ಯಕ್ಕೆ ಒಳ್ಳೆಯದಲ್ಲ ಎಂದು ವಿಜಯೇಂದ್ರ ಕಿಡಿಕಾರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಮನಗರ ಜಿಲ್ಲೆಯನ್ನು, ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಿರೋದು ರಿಯಲ್ ಎಸ್ಟೇಟ್ಗಾಗಿ ಎಂದು ಆರೋಪಿಸಿದರು.