ಬೆಂಗಳೂರು : ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಾಮಿಟ್ರಿ ಬ್ರಿವರಿ ಅಂಡ್ ಕಿಚನ್ ಪಬ್ಗೆ ನುಗ್ಗಿ 50 ಸಾವಿರ ರೂಪಾಯಿ ಕಳ್ಳತನ ಮಾಡಿ, ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ. ತಂಗಿ ಮದುವೆಗಾಗಿ ಹಣ ಹೊಂದಿಸಲು ಕಳ್ಳತನ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ಧಾರೆ.
ಪಬ್ನ ಭದ್ರತಾ ಸಿಬ್ಬಂದಿ ವಿನಯ್ ಕುಮಾರ್ ನೀಡಿದ ದೂರು ಆಧರಿಸಿ ಒಡಿಶಾ ಮೂಲದ ದಿಲೀಪ್ ಕುಮಾರ್ (29) ಎಂಬುವನನ್ನು ಬಂಧಿಸಿ 6 ಸಾವಿರ ನಗದು, ಕೃತ್ಯಕ್ಕೆ ಬಳಸಿದ ಕಟಿಂಗ್ ಪ್ಲೇಯರ್ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2016ರಲ್ಲಿ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ ಆರೋಪಿ ಜಯನಗರ ಹಾಗೂ ಜೆ. ಪಿ. ನಗರದ ಹೋಟೆಲ್ ಹಾಗೂ ಪಬ್ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಹಣದಾಸೆಗಾಗಿ ಮನೆಯೊಂದರಲ್ಲಿ ಕಳ್ಳತನ ಮಾಡಿ 2021ರಲ್ಲಿ ಕೋರಮಂಗಲ ಪೊಲೀಸರಿಂದ ಬಂಧಿತನಾಗಿದ್ದ. ಜಾಮೀನು ಪಡೆದು ಹೊರಬಂದ ಆರೋಪಿಯು ಜೀವನ ನಿರ್ವಹಣೆಗಾಗಿ ಜಯನಗರ ಸುತ್ತಮುತ್ತಲಿನ ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಕಡಿಮೆ ಸಂಬಳ ನೀಡುತ್ತಿದ್ದರಿಂದ ಕಳೆದ ವರ್ಷ ಕೆಲಸ ತೊರೆದು ಊರಿಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ನಗರಕ್ಕೆ ಬಂದು ಜೆ. ಪಿ. ನಗರದ ಹೋಟೆಲ್ವೊಂದರಲ್ಲಿ ನಾಲ್ಕು ತಿಂಗಳ ಕೆಲಸ ಮಾಡಿ ಪುನಃ ಕೆಲಸ ತೊರೆದಿದ್ದ. ಕೆಲಸ ಹುಡುಕುವಾಗ ಹಣಕಾಸಿನ ಸಮಸ್ಯೆ ನಿವಾರಿಸಿಕೊಳ್ಳಲು ಕಳ್ಳತನ ಮಾಡಲು ಸಂಚು ರೂಪಿಸಿದ್ದ. ಇದೇ ತಿಂಗಳು 12 ರಂದು ಜಾಮಿಟ್ರಿ ಬ್ರಿವರಿ ಪಬ್ ಹಿಂಬಾಗಿಲಿನ ಬಾಗಿಲು ಮುರಿದು 50 ಸಾವಿರ ನಗದು ದೋಚಿ ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದ್ಧಾರೆ.