ಬೆಂಗಳೂರು: ರೈಲ್ವೆ ಅಪಘಾತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಯ ಜೇಬಿನಲ್ಲಿ ರೈಲ್ವೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣ ನೀಡಿ ಆತನ ಅವಲಂಬಿತರಿಗೆ ಪರಿಹಾರ ನೀಡುವಂತಿಲ್ಲ ಎಂಬ ವಾದವನ್ನು ನಿರಾಕರಿಸಿರುವ ಹೈಕೋರ್ಟ್, ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಪತ್ನಿ ಹಾಗೂ ಮಕ್ಕಳಿಗೆ 8 ಲಕ್ಷ ರು.ಗಳ ಪರಿಹಾರ ನೀಡುವಂತೆ ಇಂದು ಆದೇಶಿಸಿದೆ.
ಹತ್ತು ವರ್ಷಗಳ ಹಿಂದೆ ಆಕಸ್ಮಿಕವಾಗಿ ಚಲಿಸುವ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದ ವಿಜಯಪುರದ ಅಮಿನಾಸಾಬ್ ಮುಲ್ಲಾ ಅವರ ಜೇಬಿನಲ್ಲಿ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣ ನೀಡಿ ಪರಿಹಾರ ನೀಡಿದ ರೈಲ್ವೆ ಟ್ರಿಬ್ಯೂನಲ್ ಆದೇಶ ಪ್ರಶ್ನಿಸಿ ಮೃತರ ಪತ್ನಿ ಹಾಗೂ ಮಕ್ಕಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ವಿಜಯಪುರ ಮತ್ತು ಮಿಂಚಿನಹಾಳ ರೈಲು ನಿಲ್ದಾಣಗಳ ಮಧ್ಯೆ ರೈಲು ಟ್ರ್ಯಾಕ್ ನಲ್ಲಿ ಮೃತದೇಹ ಪತ್ತೆಯಾಗಿದೆ. ಆ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದ್ದು, ಮೃತನ ಮರಣೋತ್ತರ ಪರೀಕ್ಷಾ ವರದಿಯಲ್ಲಿ, ಶಾಕ್ ನಿಂದ ಹಲವು ಅಂಗಗಳಿಗೆ ಗಾಯಗಳಾಗಿ ಸಾವನ್ನಪ್ಪಿರುವುದಾಗಿ ಹೇಳಲಾಗಿದೆ. ಎಲ್ಲಾ ದಾಖಲೆಗಳು ಆತ ರೈಲ್ವೆ ಅಪಘಾತದಲ್ಲಿಯೇ ಸಾವನ್ನಪ್ಪಿರುವುದಾಗಿ ಖಚಿತಪಡಿಸುತ್ತವೆ ಎಂದೂ ನ್ಯಾಯಾಲಯ ತಿಳಿಸಿದೆ.
Laxmi News 24×7