ಶಿವಮೊಗ್ಗ: ಮರಣೋತ್ತರ ಪರೀಕ್ಷೆಯ ವರದಿ ನೀಡಲು 20 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟು 10 ಸಾವಿರ ರೂ ಪಡೆಯುವಾಗ ಶಿಕಾರಿಪುರ ತಾಲೂಕು ಆಸ್ಪತ್ರೆಯ ವೈದ್ಯ ಡಾ.ಗೋಪಾಲ್ ಜಿ.ಹರಿಗಿ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ವಿವರ: ಶಿಕಾರಿಪುರ ತಾಲೂಕು ಕಪ್ಪನಹಳ್ಳಿ ಗ್ರಾಮದ ಸುನೀಲ್ ಎಂಬವರು ಮರಣೋತ್ತರ ಪರೀಕ್ಷೆ ವರದಿ ನೀಡಲು ಹಣದ ಬೇಡಿಕೆ ಇಟ್ಟಿರುವ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಇಂದು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ದೂರುದಾರ ಸುನೀಲ್ ಅವರ ಸ್ನೇಹಿತ ರಾಕೇಶ್ ಅವರ ಅಕ್ಕನ ಗಂಡ ಸತೀಶ್ ಮಂಚಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ವರದಿ ನೀಡಲು ವೈದ್ಯ ಡಾ.ಗೋಪಾಲ್ ಜಿ ಹರಿಗಿ 20 ಸಾವಿರ ರೂ ಬೇಡಿಕೆ ಇಟ್ಟಿದ್ದರಂತೆ. ಆಸ್ಪತ್ರೆಯ ಕೊಠಡಿಯಲ್ಲಿ ಡಾ.ಗೋಪಾಲ್ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಟ್ರಾಪ್ ಮಾಡಿದ್ದಾರೆ.
ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ ಪೆಕ್ಟರ್ ಗುರುರಾಜ ಅವರು ಆರೋಪಿ ವೈದ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಇನ್ಸ್ ಪೆಕ್ಟರ್ ವೀರಬಸಯ್ಯ ಕುಸಲಾಪುರ, ಸಿಬ್ಬಂದಿಗಳಾದ ಯೋಗೇಶ್, ಮಂಜುನಾಥ್, ಸುರೇಂದ್ರ, ಚನ್ನೇಶ್, ದೇವರಾಜ್, ಪ್ರಕಾಶ್ ಮತ್ತು ಆದರ್ಶ್ ದಾಳಿಯ ವೇಳೆ ಹಾಜರಿದ್ದರು.