ಚಿಕ್ಕೋಡಿ (ಬೆಳಗಾವಿ) : ಸೊಸೆಗೆ ಮಕ್ಕಳಾಗಲಿಲ್ಲ ಎಂದು ಅತ್ತೆಯೇ ಮಹಿಳೆಯನ್ನು ಕಲ್ಲಿನಿಂದ ಜಜ್ಜಿ, ಭೀಕರವಾಗಿ ಕೊಲೆ ಮಾಡಿರುವ ಧಾರುಣ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಮಲಬಾದ್ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೇಣುಕಾ ಸಂತೋಷ ಹೊನಕಾಂಡೆ (27) ಕೊಲೆಯಾದ ಮೃತ ದುರ್ದೈವಿ. ಸೊಸೆಗೆ ಮಕ್ಕಳಾಗಲಿಲ್ಲವೆಂದು ಕಳೆದ ಶನಿವಾರದಂದು ಮಹಿಳೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆ ಪತಿ ಸಂತೋಷ ಹೊನಕಾಂಡೆ, ಮಾವ ಕಾಮಣ್ಣ ಹೊನಕಾಂಡೆ, ಅತ್ತೆ ಜಯಶ್ರೀ ಹೊನಕಾಂಡೆ ಎಂಬುವರನ್ನು ಅಥಣಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಎಸ್ಪಿ ಭೀಮಶಂಕರ್ ಗುಳೇದ್ ಹೇಳಿದ್ದೇನು? : ದಿನಾಂಕ 17.05.2025 ರಂದು ರಾತ್ರಿ ಎಂಟು ಗಂಟೆ ಸುಮಾರಿಗೆ ಮಲಬಾದಿ ಗ್ರಾಮದ ಹತ್ತಿರ ಆರೋಪಿತರಾದ ಕಾಮಣ್ಣ ಹೊನಕಾಂಡೆ ಮತ್ತು ಜಯಶ್ರೀ ಇವರು ತಮ್ಮ ಮೋಟಾರ್ ಸೈಕಲ್ ಮೇಲೆ ಅವರ ಸೊಸೆ ರೇಣುಕಾ ಸಂತೋಷ್ ಹೊನಕಾಂಡೆಯನ್ನು ಕೂರಿಸಿಕೊಂಡು ಹೋಗಿ, ರಸ್ತೆ ಮೇಲೆ ರೇಣುಕಾರನ್ನು ಕೆಳಕ್ಕೆ ಕೆಡವಿದ್ದಾರೆ. ನಂತರ ಅವಳ ತಲೆಗೆ ಕಲ್ಲಿನಿಂದ ಜಜ್ಜಿ, ಕುತ್ತಿಗೆಗೆ ಸೀರೆಯಿಂದ ಬಿಗಿದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದಿದ್ದಾರೆ.
ಇದಾದ ನಂತರ ಆರೋಪಿತ ಹಂತಕರು ದ್ವಿಚಕ್ರ ವಾಹನಕ್ಕೆ ಸೀರೆ ತಗುಲಿ ಬಿದ್ದು ಗಾಯಗೊಂಡು ಮಹಿಳೆ ಮೃತಪಟ್ಟಿದ್ದಾಳೆ ಎಂದು ಬಿಂಬಿಸೋಕೆ ಮುಂದಾಗಿದ್ದರು. ನಂತರ ಅವಳನ್ನು ಕೊಲೆ ಮಾಡಿದ ಸ್ಥಳದಿಂದ ಸುಮಾರು 120 ಅಡಿ ದೂರದವರೆಗೆ ಬೈಕ್ನಿಂದ ಎಳೆದುಕೊಂಡು ಹೋಗಿ, ಅವಳು ಬೈಕ್ ಮೇಲಿನಿಂದ ಬಿದ್ದು ಸತ್ತುಹೋಗಿರುತ್ತಾಳೆ ಎಂದು ಅಪಘಾತದ ದೃಶ್ಯವನ್ನು ಸೃಷ್ಟಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನಂತರ ನಮ್ಮ ತನಿಖೆಯಲ್ಲಿ ಕಾಮಣ್ಣ ಹೊನಕಾಂಡೆ ಮತ್ತು ಜಯಶ್ರೀ ಹೊನಕಾಂಡೆ ಇವರು ಕಂಡುಬಂದಿದ್ದರಿಂದ ಮತ್ತು ಕೊಲೆಗೆ ಆರೋಪಿತರ ಮಗ ಸಂತೋಷ್ ಕೂಡ ದುಷ್ಪ್ರೇರಣೆ ನೀಡಿದ್ದು ತಿಳಿದು ಬಂದಿದ್ದರಿಂದ ಅಥಣಿ ಪೊಲೀಸ್ ಠಾಣೆಯಲ್ಲಿ ಮೂರು ಜನ ಆರೋಪಿತರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.