ಬೆಂಗಳೂರು: ಕೆಲಸಕ್ಕಾಗಿ ನೀವೇನಾದರೂ ಇಂಟರ್ವ್ಯೂಗೆ ಹೋದರೆ ಹುಷಾರಾಗಿರಿ. ಕಾರಣ, ಸಂದರ್ಶನ ಮಾಡುವ ಸೋಗಿನಲ್ಲಿ, ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದ ಆರೋಪಿ ಮಾನವ ಸಂಪನ್ಮೂಲ ಅಧಿಕಾರಿ (ಹೆಚ್ಆರ್) ಸಿಸಿಬಿ ಪೊಲೀಸರ ಅತಿಥಿಯಾಗಿದ್ಧಾನೆ.
ಮೆಕ್ರೋಸಾಪ್ಟ್, ಬಾಷ್ ಸೇರಿ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 8 ಮಂದಿ ಉದ್ಯೊಗಾಂಕ್ಷಿಗಳಿಂದ 14.23 ಲಕ್ಷ ಹಣ ಪಡೆದಿದ್ದ ಖಾಸಗಿ ಕಂಪನಿ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಂಚನೆಗೊಳಗಾದ ಯುವತಿಯು ನೀಡಿದ ದೂರು ಆಧರಿಸಿ ಪತ್ನೂಲ್ ಕಲಂದರ್ ಖಾನ್ (43) ಎಂಬವನನ್ನು ಬಂಧಿಸಿ, ಆತನಿಂದ 1.50 ಲಕ್ಷ ರೂ. ಹಣ ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಕಲಂದರ್ ಜೆ.ಪಿ.ನಗರದ ಸಾರಕ್ಕಿ ನಿವಾಸಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದ. ಇದೇ ವೇಳೆ ವಂಚನೆಗೊಳಗಾದ ಯುವತಿಯು ಆರೋಪಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಕೆಲಸ ಖಾಲಿಯಿರುವುದಾಗಿ ಆನ್ಲೈನ್ನಲ್ಲಿ ತಿಳಿದುಕೊಂಡು ಸಂದರ್ಶನಕ್ಕೆ ಹೋಗಿದ್ದಳು.