ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ 9ನೇ ತರಗತಿ ಓದುತ್ತಿದ್ದ ಬಾಲಕನೊರ್ವನಿಗೆ 6ನೇ ತರಗತಿ ಓದುತ್ತಿದ್ದ ಮತ್ತೋರ್ವ ಬಾಲಕ ಚಾಕುವಿನಿಂದ ಇರಿದ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಕಮರಿಪೇಟೆಯಲ್ಲಿ ನಡೆದಿದೆ.
ಚೇತನ ರಕ್ಕಸಗಿ (14 )ಎಂಬಾತನೇ ಚಾಕು ಇರಿತಕ್ಕೆ ಒಳಗಾಗಿ ಮೃತಪಟ್ಟ ಬಾಲಕನಾಗಿದ್ದಾನೆ. ಇನ್ನು ಸಾಯಿ ಹಬೀಬ್ ಎಂಬಾತ ಚಾಕು ಇರಿದ ಬಾಲಕ ಎಂದು ತಿಳಿದು ಬಂದಿದೆ.
ಎಂದಿನಂತೆ ಚೇತನ ತಮ್ಮ ಮನೆಯಲ್ಲಿ ಚಹಾ ಕುಡಿದು, ತನಗೆ ಹೊಸ ಬಟ್ಟೆ ತರುವಂತೆ ತನ್ನ ತಾಯಿಗೆ ತಿಳಿಸಿ ಹೊರಗಡೆ ಹೋಗಿದ್ದ. ಈ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಾಯಿ ಹಬೀಬ್ ಜೊತೆಗೆ ಜಗಳ ಏರ್ಪಟ್ಟಿದೆ. ಈ ವೇಳೆ ಸಾಯಿ ಹಬೀಬ್ ರೇಡಿಯಂ ಕಟರ್ನಿಂದ ಇರಿದಿದ್ದಾನೆ. ಪರಿಣಾಮ ಚೇತನ್ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್ ಆಸ್ಪತ್ರೆಗೆ ರವಾನಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.
ಪ್ರಕರಣದ ಬಗ್ಗೆ ಕಮಿಷನರ್ ಪ್ರತಿಕ್ರಿಯೆ: ಈ ಕುರಿತಂತೆ ಹುಬ್ಬಳ್ಳಿಯ ಧಾರವಾಡ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್, ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಆ ಬಳಿಕ ಮಾತನಾಡಿದ ಅವರು,ನನ್ನ ಜೀವನದಲ್ಲೇ ಇಂತಹ ಘಟನೆಯನ್ನು ನಾನು ನೋಡಿಲ್ಲ. ಆರನೇ ತರಗತಿಯ ಬಾಲಕನಿಗೆ ಕೊಲೆ ಮಾಡುವಂತಹ ಮನಸ್ಥಿತಿ ಬಂದಿದೆ. ಪೋಷಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು.
Laxmi News 24×7