Breaking News

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಲಕ್ಷ ಸಸಿ ನೆಡುವ ಯೋಜನೆ ವಿಫಲ: ನಿರ್ವಹಣೆ ಇಲ್ಲದೇ ಒಣಗಿ ಹೋದ ಸಾವಿರಾರು ಗಿಡಗಳು

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಳೆದ ವರ್ಷ ಉದ್ದೇಶಿಸಿದ್ದ ಒಂದು ಲಕ್ಷ ಗಿಡ ನೆಡುವ ಯೋಜನೆ ಸಂಪೂರ್ಣವಾಗಿ ವಿಫಲವಾಗಿದೆ. ಪಾಲಿಕೆ ಲಕ್ಷ ಸಸಿ ನೆಡುವ ಗುರಿ ಇಟ್ಟುಕೊಂಡಿತ್ತು. ಆದರೆ ಏಳೇ ಸಾವಿರ ಗಿಡಗಳನ್ನು ನೆಟ್ಟಿದ್ದು, ಅವುಗಳು ಕೂಡ ಸೂಕ್ತ ನಿರ್ವಹಣೆ ಇಲ್ಲದೆ ಒಣಗಿ ಹೋಗಿವೆ.

ಎಲೆಲ್ಲಿ ಸಸಿ ನೆಡಲು ಉದ್ದೇಶಿಸಲಾಗಿತ್ತು?: ಕಳೆದ ವರ್ಷ ಮಳೆಗಾಲದ ಅವಧಿಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 575 ಉದ್ಯಾನಗಳ ಖಾಲಿ ಜಾಗ, ಪಾಲಿಕೆ ಒಡೆತನದ ಖಾಲಿ ಜಾಗ, ರಸ್ತೆ ಅಕ್ಕಪಕ್ಕ, ರಸ್ತೆ ವಿಭಜಕಗಳಲ್ಲಿ ಒಂದು ಲಕ್ಷ ಸಸಿ ನೆಡುವ ಮೂಲಕ ಮಹಾನಗರವನ್ನು ಹಸಿರು ನಗರವನ್ನಾಗಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಇದು ಹೆಸರಿಗೆ ಮಾತ್ರ ಎಂಬಂತಾಗಿದ್ದು, ಯೋಜನೆಗೆ ತೀವ್ರ ಹಿನ್ನಡೆಯಾಗಿದೆ. ಶೇ.7ರಷ್ಟು ಮಾತ್ರ ಕಾರ್ಯರೂಪಕ್ಕೆ ಬಂದಿದೆ.25 ಕೋಟಿ ರೂ ವೆಚ್ಚದ ಯೋಜನೆ: ಪಾಲಿಕೆಯು 2024-25ನೇ ಸಾಲಿನ ಬಜೆಟ್‌ನಲ್ಲಿ ಹಸಿರು ಉಸಿರು ಯೋಜನೆಯ ಅಡಿ 5 ಕೋಟಿ ರೂ ಅನುದಾನ ಮೀಸಲಿಟ್ಟಿತ್ತು. ಸಸಿಗಳ ಖರೀದಿ, ಸಂರಕ್ಷಣೆಗೆ ಬೇಕಾಗುವ ಹಣವನ್ನು ಈ ಯೋಜನೆಯಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಯೋಜನೆಗೂ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಆದರೆ, ಅದು ಸಫಲವಾಗಿಲ್ಲ.

ಯಾವೆಲ್ಲ ಗಿಡಗಳು?: ಪಾಲಿಕೆ ಕಳೆದ ವರ್ಷದ ಮಳೆಗಾಲವನ್ನು ಗಮನದಲ್ಲಿಟ್ಟುಕೊಂಡು ಹಂತ-ಹಂತವಾಗಿ ಒಂದು ಲಕ್ಷ ಸಸಿ ನೆಡಲು ಯೋಜನೆ ಹಾಕಿಕೊಂಡಿತ್ತು. ಅರಣ್ಯ ಇಲಾಖೆಯೊಂದಿಗೆ ಪಾಲಿಕೆ ಅಧಿಕಾರಿಗಳು ಚರ್ಚಿಸಿ ಆಲದ ಗಿಡ, ಹೊಳೆ ದಾಸವಾಳ, ಕಾಡು ಸಂಪಿಗೆ, ಬಸವನಪಾದ, ಹತ್ತಿ ಸಸಿ ಸೇರಿದಂತೆ ಭೂಮಿಯಲ್ಲಿ ಅಗಲವಾಗಿ ಬೇರು ಬಿಡದ ಗಿಡಗಳನ್ನು ಗುರುತಿಸಿ ಅಂತಹ ಸಸಿಗಳನ್ನು ನೆಡಲು ಯೋಜನೆ ಹಾಕಿಕೊಂಡಿತ್ತು.

ಸಸಿಗಳ ರಕ್ಷಣೆಗಿಲ್ಲ ಆದ್ಯತೆ: ಇಲ್ಲಿನ ಸಪ್ತಗಿರಿ ಪಾರ್ಕ್, ಪ್ರಜಾನಗರ, ಉಣಕಲ್ಲ ಸೇರಿದಂತೆ 4, 5, 7 ಝೋನಲ್‌ಗಳಲ್ಲಿನ ಉದ್ಯಾನಗಳಲ್ಲಿ ಸಸಿ ನೆಡಲಾಗಿದೆ. ಆದರೆ ಸಮರ್ಪಕ ನಿರ್ವಹಣೆ ಇಲ್ಲದಿರುವುದರಿಂದ ಸಸಿಗಳೆಲ್ಲ ಒಣಗಿ ಹೋಗಿವೆ. ಕೆಲವು ಸಸಿಗಳು ದನ-ಕರುಗಳಿಗೆ ಆಹಾರವಾಗಿದೆ.

ನೆಟ್ಟಿದ್ದು 7 ಸಾವಿರ ಗಿಡಗಳು: ಸಸಿ ನೆಡುವ ಕಾರ್ಯಕ್ಕೆ ಮೊದಲ ಹಂತದಲ್ಲಿ ಬೇಕಾದ 25 ಸಾವಿರ ಸಸಿಗಳನ್ನು ನೀಡಲು ಅರಣ್ಯ ಇಲಾಖೆ ಸಿದ್ಧವಾಗಿತ್ತು. ಆದರೆ, ಒಂದು ವರ್ಷದಲ್ಲಿ ಕೇವಲ 7 ಸಾವಿರ ಗಿಡಗಳನ್ನು ಮಾತ್ರ ನೆಡಲು ಸಾಧ್ಯವಾಗಿದೆ. ಅಷ್ಟರೊಳಗೆ ಮಳೆಗಾಲ ಮುಗಿದ ಹಿನ್ನೆಲೆಯಲ್ಲಿ ಯೋಜನೆಯನ್ನು ಅಲ್ಲಿಗೆ ನಿಲ್ಲಿಸಲಾಗಿದೆ.

ಮಹಾನಗರ ‌ಪಾಲಿಕೆ ಆಯುಕ್ತರ ಸ್ಪಷ್ಟನೆ: ಈ ಕುರಿತಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಈಟಿವಿ ಭಾರತದ ಜೊತೆ ಮಾತನಾಡಿ, “ಕಳೆದ ವರ್ಷ ಮಳೆಗಾಲದ ಕೊನೆ ಕೊನೆಗೆ ಯೋಜನೆ ಕೈಗೆತ್ತಿಕೊಂಡಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯವಾಗಿಲ್ಲ. ಈ ಮಳೆಗಾಲದಲ್ಲಿ ಸಂಪೂರ್ಣವಾಗಿ ಸಸಿ ನೆಡುವ ಕಾರ್ಯವನ್ನು ಕೈಗೆತ್ತಿಕೊಳ್ಳಲಿದ್ದೇವೆ. ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಸಹಯೋಗದಿಂದ ಮತ್ತೆ ಸಸಿಗಳನ್ನು ನೆಡಲಾಗುತ್ತದೆ. ಕಳೆದ ವರ್ಷದ ಯೋಜನೆಯನ್ನು ಯಥಾವತ್ತಾಗಿ ಮುಂದುವರೆಸಲಾಗುವುದು. ಇಲ್ಲಿವರೆಗೂ ಯಾವುದೇ ಗುತ್ತಿಗೆದಾರನಿಗೂ ಹಣ ಬಿಡುಗಡೆ ಮಾಡಿಲ್ಲ. ‌ಪ್ರಸಕ್ತ ವರ್ಷ ಯೋಜನೆ ಪೂರ್ಣಗೊಳಿಸಲಾಗುವುದು” ಎಂದರು.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ