ವಿಜಯಪುರ, ಏಪ್ರಿಲ್ 23: ಜಾತ್ರೆಯೆಂದರೆ ಅಲ್ಲಿ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಇಡೀ ಊರ ತುಂಬೆಲ್ಲಾ ಜನರು ಸೇರಿರುತ್ತಾರೆ. ತಮ್ಮೂರ ಜಾತ್ರೆಗೆ ಹೆಣ್ಣು ಮಕ್ಕಳು ಸಹ ತವರಿಗೆ ಆಗಮಿಸಿರುತ್ತಾರೆ. ಸಂಬಂಧಿಕರು ಬಂಧು-ಬಳಗ ಕೂಡ ಬಂದಿರುತ್ತಾರೆ. ವಿಜಯಪುರ (Vijayapura) ಜಿಲ್ಲೆಯ ಬಬಲೇಶ್ವರ (Bableshwar) ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಗ್ರಾಮ ದೇವರಾದ ಹನುಮಂತ ದೇವರ ಜಾತ್ರೆ ನಡೆಯುತ್ತಿದೆ. ಜಾತ್ರೆಯ ಪ್ರಯುಕ್ತ ಹಾಲೋಕುಳಿ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ. ಜಾತ್ರೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ಧಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ಗ್ರಾಮದ ಅವಿವಾಹಿತ ಯುವಕರು ಒಂದು ಪ್ಲ್ಯಾನ್ ಮಾಡಿದ್ದಾರೆ. ಅವಿವಾಹಿತರು ಮದುವೆಯಾಗಲು ಕನ್ಯೆ ಸಿಗದಿದ್ದಕ್ಕೆ ಜಾತ್ರೆಗೆ ಬಂದವರ ಗಮನ ಸೆಳೆಯಲು ತಮಗೊಂದು ಕನ್ಯೆ ನೋಡಿ ಎಂದು ಬ್ಯಾನರ್ ಹಾಕಿದ್ದಾರೆ. 20 ಜನ ಯುವಕರು ಬ್ರ್ಯಾಂಡ್ ಬಾಯ್ಸ್ ಹೆಸರಿನಲ್ಲಿ ಬ್ಯಾನರ್ ಹಾಕಿದ್ದಾರೆ.
ಗ್ರಾಮೀಣ ಭಾಗ ಹಾಗೂ ಕೃಷಿ ಕೆಲಸ ಮಾಡುತ್ತಿರುವ ಕಾರಣ ಇವರಿಗೆ ಕನ್ಯೆ ಕೊಡುತ್ತಿಲ್ಲ. ಹೀಗಾಗಿ 20 ಜನ ಯುವಕರ ತಂಡ ತಮ್ಮೆಲ್ಲರ ಫೋಟೋಗಳನ್ನು ಬ್ಯಾನರ್ನಲ್ಲಿ ಹಾಕಿ ಕೆಳಗಡೆ ಜಾತ್ರೆಗೆ ಬಂದ ಭಕ್ತಾದಿಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ “ಬ್ಯಾನರ್ ನೋಡಿ ಹಾಗೇ ಹೋಗಬೇಡಿ. ಎಲ್ಲರಿಗೂ ಹುಡುಗಿ ನೋಡಿ” ಎಂದು ಬರೆಸಿದ್ದಾರೆ. ಬ್ಯಾಚುಲರ್ ಬಾಯ್ಸ್ ಹಾಕಿರುವ ಬ್ಯಾನರ್ ಇದೀಗ ಜಾತ್ರೆಗೆ ಬಂದವರ ಗಮನ ಸೆಳೆಯುತ್ತಿದೆ.
Laxmi News 24×7