ಕೃಷಿಕರ ನಗರ ಪ್ರದೇಶದ ವಲಸೆಯಿಂದ ಕೃಷಿಗೆ ಪೆಟ್ಟು: ಸಿ.ಎಂ ಸಿದ್ದರಾಮಯ್ಯ*
*ಒಣ ಬೇಸಾಯ ಮಾಡುವ ರೈತರೇ ಹೆಚ್ಚು: ಸಮಗ್ರ ಕೃಷಿ-ಕೃಷಿಕರ ಪ್ರಗತಿಗೆ ಕ್ರಮ: ಸಿ.ಎಂ*
*ರೈತರು, ಶಿಕ್ಷಕರು, ಸೈನಿಕರು ದೇಶದ ರಕ್ಷಕರು: ಸಿಎಂ*
*ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ನಾಳೆಯೇ ಮಹದಾಯಿ ಯೋಜನೆ ಜಾರಿ: ಸಿ.ಎಂ ಪುನರುಚ್ಚಾರ*
ಬೆಳಗಾವಿ : ರೈತರು, ಶಿಕ್ಷಕರು, ಸೈನಿಕರು ದೇಶದ ರಕ್ಷಕರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಸಹಾಯಧನದ ಅಡಿಯಲ್ಲಿ ಸುಮಾರು 400 ಕೋಟಿ ವೆಚ್ಚದ ಕೃಷಿ ಯಂತ್ರ ಮತ್ತು ಸಲಕರಣೆಗಳನ್ನು ರೈತರಿಗೆ ವಿತರಿಸಿ ಮಾತನಾಡಿದರು.
ಕೃಷಿಕರಿಗೆ ಶೇ40 ರಷ್ಟು , ಪರಿಶಿಷ್ಠ ಸಮಾಜದ ಕೃಷಿಕರಿಗೆ ಶೇ50 ರಷ್ಟು ರಿಯಾಯ್ತಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಿದ್ದೇವೆ. ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿ ಯಂತ್ರಗಳ ಮೇಲಿನ ಅವಲಂಭನೆ ಹೆಚ್ಚಾಗಿದೆ. ಹೀಗಾಗಿ ರಿಯಾಯ್ತಿ ಬೆಲೆಯಲ್ಲಿ ಕೃಷಿಯಂತ್ರಗಳ ವಿತರಣೆ ಸರ್ಕಾರ ಮಾಡುತ್ತಿದೆ ಎಂದರು.
ಕೃಷಿಭಾಗ್ಯವನ್ನು ಒಣಕೃಷಿ ಬೆಳೆಗಾರರಿಗೆ ಜಾರಿಗೆ ತಂದಿದ್ದೇವೆ. ಕಳೆದ ವರ್ಷ 25 ಸಾವಿರಕ್ಕೂ ಹೆಚ್ಚು ಕೃಷಿ ಹೊಂಡ ಮಾಡಿಸಿದ್ದೇವೆ. ಈ ವರ್ಷ ಇದು ಇನ್ನೂ ಹೆಚ್ಚಾಗುತ್ತದೆ. ಕೃಷಿಹೊಂಡ ಬಹಳ ಉಪಯುಕ್ತ ಯೋಜನೆಯಾಗಿದೆ ಎಂದು ತಜ್ಞರು ವರದಿ ನೀಡಿದ್ದಾರೆ ಎಂದರು.
ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಯಾಗಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ಆಹಾರ ಉತ್ಪಾದಕರಾದ ನಿಮ್ಮ ಕಾರಣದಿಂದ 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆಯನ್ನು ಕೊಡಲು ಶುರು ಮಾಡಿದೆವು ಎಂದರು.
ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ 23 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಇವತ್ತಿನವರೆಗೂ ಒಂದು ಪೈಸೆಯನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಮಹದಾಯಿ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆಯನ್ನೇ ಕೊಡುತ್ತಿಲ್ಲ. ಕೇಂದ್ರ ಸರ್ಕಾರ ಒಪ್ಪಿಗೆ ಕೊಟ್ಟರೆ ತಕ್ಷಣ ಈ ಎಲ್ಲಾ ನೀರಾವರಿ ಯೋಜನೆಗಳನ್ನು ಆರಂಭಿಸಲು ಸರ್ಕಾರ ಸಿದ್ಧವಿದೆ ಎಂದು ಘೋಷಿಸಿದರು.
Laxmi News 24×7