ಕೊಪ್ಪಳ: ಐತಿಹಾಸಿಕ ಹಿನ್ನೆಲೆಯುಳ್ಳ ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಸ್ಮಾರಕಗಳು, ಶಿಲಾ ಶಾಸನಗಳು ಕಾಣಸಿಗುತ್ತವೆ. ಅದರಲ್ಲೂ ಶಿಲ್ಪಕಲಾ ವೈಭವವನ್ನು ಬಿಂಬಿಸುವ, ದೇವಾಲಯಗಳ ತೊಟ್ಟಿಲು ಎಂದೇ ಪ್ರಸಿದ್ಧಿ ಪಡೆದಿರುವ ಕುಕನೂರ ತಾಲೂಕಿನ ಇಟಗಿಯ ಮಹಾದೇವ ದೇವಾಲಯವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ನಾಮನಿರ್ದೇಶನ ಮಾಡಲು ಪ್ರಸ್ತಾವ ಕಳುಹಿಸುವಂತೆ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕಾರ್ಯದರ್ಶಿಗೆ ಪುರಾತತ್ವ ಇಲಾಖೆ ಪತ್ರ ಬರೆದಿದೆ.
ಈಗಾಗಲೇ ಕರ್ನಾಟಕದ ಹಂಪಿ, ಬೇಲೂರು, ಹಳೇಬೀಡು ಸೇರಿ ಹಲವು ಪ್ರದೇಶಗಳು ವಿಶ್ವವಿಖ್ಯಾತಿ ಹೊಂದಿವೆ. ಈ ಸ್ಥಳಗಳನ್ನು ವಿಶ್ವದ ಪ್ರವಾಸೋದ್ಯಮ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿರುವ ಕಲ್ಯಾಣಿ ಚಾಲುಕ್ಯರ ಸ್ಮಾರಕಗಳ ಸಮೂಹವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದ 7 ಸ್ಥಳಗಳನ್ನು ಆಯ್ಕೆ ಮಾಡಿದ್ದು, ಇದರಲ್ಲಿ ಇಟಗಿಯ ಮಹಾದೇವ ದೇವಾಲಯವೂ ಒಂದು. ಈ ಸ್ಥಳಗಳನ್ನು ಕೇಂದ್ರ ಸಂಸ್ಕೃತಿ ಮಂತ್ರಾಲಯ ಅಧೀನದ ನೋಡಲ್ ಏಜೆನ್ಸಿಯಾದ ಭಾರತೀಯ ಪುರಾತತ್ವ ಸರ್ವೇಕ್ಷಣೆ ಮೂಲಕ ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿ ಸೇರ್ಪಡೆಗೆ ಅಂತಾರಾಷ್ಟ್ರೀಯ ಸ್ಮಾರಕಗಳ ಮಂಡಳಿಗೆ ಪ್ರಸ್ತಾವ ಕಳುಹಿಸುವಂತೆ ಪುರಾತತ್ವ ಇಲಾಖೆ ಮನವಿ ಮಾಡಿದೆ.
Laxmi News 24×7