ಬೆಂಗಳೂರು: ಇಂಧನ ದರ ಏರಿಕೆ, ಟೋಲ್ ಶುಲ್ಕ ಹೆಚ್ಚಳ, ಆರ್ಟಿಒ ಅಧಿಕಾರಿಗಳಿಂದ ಕಿರುಕುಳದ ಆರೋಪದ ವಿರುದ್ಧ ಇಂದು ಮಧ್ಯರಾತ್ರಿಯಿಂದಲೇ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಕರೆ ಕೊಟ್ಟಿದೆ.
ಡೀಸೆಲ್ ದರ ಇಳಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಲಾರಿ ಮಾಲೀಕರು ಏ.14ರವರೆಗೆ ಗಡುವು ನೀಡಿದ್ದರು. ಆದರೆ, ರಾಜ್ಯ ಸರ್ಕಾರದಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿಯಿಂದಲೇ ಮುಷ್ಕರಕ್ಕೆ ಮುಂದಾಗಿರುವುದಾಗಿ ರಾಜ್ಯ ಲಾರಿ ಮಾಲೀಕರ ಸಂಘ ಹೇಳಿದೆ. ರಾಜ್ಯದಲ್ಲಿರುವ ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಸೇವೆಯನ್ನು ಸ್ಥಗಿತಗೊಳಿಸಲಿದ್ದು, ಹಲವು ಸೇವೆಗಳಿಗೆ ಬಂದ್ ಬಿಸಿ ತಟ್ಟಲಿದೆ.
ಬಂದ್ ಕುರಿತು ಮಾಹಿತಿ ನೀಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ, ”ಪೆಟ್ರೋಲ್, ಡೀಸೆಲ್ ಹಾಗೂ ಟೋಲ್ ದರಗಳ ಪರಿಷ್ಕರಣೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲಾಗಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಲಾರಿ ಮಾಲೀಕರು, ಪೆಟ್ರೋಲ್ ಬಂಕ್ಗಳ ಮಾಲೀಕರ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ. ವಾಣಿಜ್ಯ ಸೇರಿದಂತೆ ಎಲ್ಲ ಸೇವೆಗಳು ಸ್ತಬ್ಧವಾಗಲಿದೆ” ಎಂದಿದ್ದಾರೆ.
ಮತ್ತೊಂದೆಡೆ, ಫೆಡರೇಶನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್ನ ಗೌರವಾಧ್ಯಕ್ಷ ಚನ್ನಾರೆಡ್ಡಿ ಮುಷ್ಕರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ”ಮುಷ್ಕರದ ಭಯ ಸಾರ್ವಜನಿಕರಿಗೆ ಬೇಡ. ಲಾರಿಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿವೆ. ನಾವು ಈ ಮುಷ್ಕರವನ್ನು ಬೆಂಬಲಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
Laxmi News 24×7