ಬೆಂಗಳೂರು : ಸಾರಿಗೆ ನೌಕರರ ದಿಢೀರ್ ಪ್ರತಿಭಟನೆ ಹಿನ್ನಲೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಮಾತುಕತೆಗೆ ಆಹ್ವಾನಿಸಿದರೂ ಚರ್ಚೆ ಮಾಡಲು ನೌಕರರು ಸಿದ್ಧರಿಲ್ಲ. ಈ ಹಿನ್ನಲೆ ನಾಳೆಯಿಂದ ಸರ್ಕಾರಿ ದರದಲ್ಲಿಯೇ ಖಾಸಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಈ ಕುರಿತು ಮುಖ್ಯಮಂತ್ರಿಗಳು ಕೂಡ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ಜೊತೆ ಕೂಡ ಮಾತುಕತೆ ನಡೆಸಿದ್ದೇವೆ. ನಾಳೆಯಿಂದ ಖಾಸಗಿ ವಾಹನ ಓಡಿಸುವುದಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ತಮ್ಮನ್ನು ಸರ್ಕಾರಿ ನೌಕರರನ್ನಾಗಿ ನೇಮಿಸುವಂತೆ ಆಗ್ರಹಿಸಿ ನೌಕರರು ನಡೆಸುತ್ತಿರುವ ಪ್ರತಿಭಟನೆ ಬಗೆಹರಿಯದ ಹಿನ್ನಲೆ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದರು.
ಸಾರಿಗೆ ನೌಕರರ ಧಿಡೀರ್ ಪ್ರತಿಭಟನೆಯಿಂದ ಜನರಿಗೆ ತೊಂದರೆಯಾಗುತ್ತದೆ. ನಾವೆಲ್ಲರೂ ಒಂದೇ ಕುಟುಂಬದವರು. ನೀವು ಮಾತುಕತೆಗೆ ಬನ್ನಿ ಚರ್ಚೆ ಮಾಡೋಣ. ಕುಳಿತು ಈ ಸಮಸ್ಯೆ ಬಗೆಹರಿಸಿಕೊಳ್ಳೋಣ. ನೀವೆಲ್ಲಾ ನಮ್ಮ ಕುಟುಂಬ ಸದಸ್ಯರು ಇದ್ದಂತೆ. ನಾನು ಎಲ್ಲೂ ಹೋಗಿರಲಿಲ್ಲ ಇಲ್ಲೇ ಇದ್ದೇನೆ. ಜಯಮಹಲ್ ಪ್ಯಾಲೇಸ್ನ ಸರ್ಕಾರಿ ಮನೆಗೆ ಬನ್ನಿ. ನಾನು ರಾತ್ರಿ 12 ಗಂಟೆಯವರೆಗೆ ಇಲ್ಲಿ ಕಾಯುತ್ತೇನೆ
