ಹಾಸನ : ಒಂದಲ್ಲ, ಎರಡಲ್ಲ, ಮೂರಲ್ಲ ಬರೋಬ್ಬರಿ 33 ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿ ಮಾರಿದ ಖತರ್ನಾಕ್ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಲೂರು ತಾಲೂಕಿನ ವಳಗದ್ದವಳ್ಳಿ ಗ್ರಾಮದ ಗಗನ್ (35) ಬಂಧಿತ ಆರೋಪಿ. ಬಸ್ ಸ್ಟಾಂಡ್, ರೈಲ್ವೇ ಸ್ಟೇಷನ್, ಸಾರ್ವಜನಿಕ ಸ್ಥಳಗಳೇ ಇವನ ಟಾರ್ಗೆಟ್ ಆಗಿದ್ದವು. ಬೈಕ್ ನಿಲ್ಲಿಸಿ ತುರ್ತು ಕೆಲಸಕ್ಕೆ ಹೋಗುವ ಅಥವಾ ಬಸ್ ನಿಲ್ದಾಣದ ಸಮೀಪ ಅಥವಾ ಇತರೆ ಪಾರ್ಕಿಂಗ್ ಅಲ್ಲದ ಸ್ಥಳದಲ್ಲಿ ಪಾರ್ಕ್ ಮಾಡಿದ ದ್ವಿಚಕ್ರ ವಾಹನಗಳನ್ನು ಡುಪ್ಲಿಕೇಟ್ ಕೀ ಬಳಸಿ ಬೈಕ್ ಕದಿಯುತ್ತಿದ್ದ. ಇತ್ತೀಚಿಗೆ ಹಾಸನದ ವಕೀಲರ ಬೈಕನ್ನು ಕಳ್ಳತನ ಮಾಡಿದ್ದ. ಹೀಗೆ ಕಳ್ಳತನ ಮಾಡಿದ ಬೈಕುಗಳನ್ನು 15 ರಿಂದ 20 ಸಾವಿರ ರೂಪಾಯಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಐದಾರು ತಿಂಗಳಲ್ಲಿ ಬರೋಬ್ಬರಿ 33 ಬೈಕುಗಳನ್ನು ಕಳ್ಳತನ ಮಾಡಿದ್ದ ಈತನನ್ನು ಹಿಡಿಯುವಲ್ಲಿ ಪೊಲೀಸರು ಹರಸಾಹಸವನ್ನೇ ಪಟ್ಟಿದ್ದಾರೆ. ಕೊನೆಗೂ ಬೈಕ್ ಕಳ್ಳತನ ಮಾಡುವ ವೇಳೆ ಸಿಸಿಟಿವಿ ಕ್ಯಾಮೆರಾದಿಂದ ಪೊಲೀಸರಿಗೆ ಈ ಖದೀಮ ಸಿಕ್ಕಿಬಿದ್ದಿದ್ದಾನೆ
.ಬೈಕ್ಗಳನ್ನ ವಶಕ್ಕೆ ಪಡೆದ ಪೊಲೀಸರು : ಆರೋಪಿ ಗಗನ್ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಬರೋಬ್ಬರಿ 33 ಬೈಕುಗಳನ್ನ ಕದ್ದು ಮಾರಾಟ ಮಾಡಿದ್ದ ವಿಚಾರ ಹೊರಬಿದ್ದಿದೆ. ಬೈಕ್ ಕಳ್ಳತನವಾಗಿದ್ದ ಮಾಲೀಕರಿಂದ ದೂರು ಪಡೆದಿದ್ದ ಪೊಲೀಸರು ಕೊನೆಗೂ ಆರೋಪಿ ಗಗನ್ ಕದ್ದು ಮಾರಾಟ ಮಾಡಿದ್ದ ಮತ್ತು ಅವುಗಳನ್ನು ಖದೀದಿಸಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಿ, ಬೈಕುಗಳನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Laxmi News 24×7