ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಪ್ರಾಮುಖ್ಯತೆಯಿಲ್ಲದ ರಾಜಕಾರಣಿ ನೀವು ಅನ್ನೋದು ಜನರಿಗೆ ಗೊತ್ತಿದೆ ಎಂದು ಬಿ ಕೆ ಹರಿಪ್ರಸಾದ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಹರಿಹಾಯ್ದಿದ್ದಾರೆ.
ಈ ಸಂಬಂಧ ಎಕ್ಸ್ ಪೋಸ್ಟ್ ಮಾಡಿರುವ ಅವರು, ”ಆಕಾಶಕ್ಕೆ ಉಗುಳಿದರೆ ನಾನು ದೊಡ್ಡ ಮನುಷ್ಯನಾಗುತ್ತೇನೆ ಎಂಬ ಹುಂಬತನದಲ್ಲಿ ಅತಿರೇಕದ, ಅವಿವೇಕದ, ಕೊಳಕು ಹೇಳಿಕೆಗಳನ್ನು ನೀಡುವ ಬಿ. ಕೆ. ಹರಿಪ್ರಸಾದ್ರವರೇ, ಸ್ವಾತಂತ್ರ್ಯ ನಂತರ ಭಾರತದಲ್ಲಿ ಕಾಂಗ್ರೆಸ್ ಆಳ್ವಿಕೆಯ ಕೊಳಕುಗಳನ್ನು ಸ್ವಚ್ಛ ಮಾಡಿದ್ದು, ಮಹಾತ್ಮ ಗಾಂಧಿಯವರು ಆರಂಭಿಸಿದ ಸ್ವಚ್ಛ ಭಾರತ ಹಾಗೂ ಸ್ವದೇಶಿ ಚಳವಳಿಯ ಕನಸನ್ನು ಅಕ್ಷರಶಃ ನನಸು ಮಾಡಿದ್ದು ದೇಶದ ಹೆಮ್ಮೆಯ ಪುತ್ರ ಪ್ರಧಾನಿ ನರೇಂದ್ರ ಮೋದಿ ಜೀಯವರು ಎನ್ನುವುದನ್ನು ನೀವೂ ಸೇರಿದಂತೆ ನಿಮ್ಮ ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ಟೀಕಿಸಿದ್ದಾರೆ.
”ಕಾಂಗ್ರೆಸ್ ತಟ್ಟೆಯಲ್ಲಿ ಹಗರಣಗಳು ಎಂಬ ಹೆಗ್ಗಣಗಳು ಸತ್ತು ಬಿದ್ದಿವೆ. ಇದರ ಬೆನ್ನಲ್ಲೇ ವಿಕೃತ ಮನಃಸ್ಥಿತಿಯ ಸೇಡಿನ ರಾಜಕಾರಣದ ಹನಿಟ್ರ್ಯಾಪ್ ದಳ್ಳುರಿ ನಿಮ್ಮ ಕಾಂಗ್ರೆಸ್ ಮನೆಯನ್ನು ಸುಡುತ್ತಿದೆ. ಇಷ್ಟಾದರೂ ಪಾಠ ಕಲಿಯದ ನೀವು, ಪರಿಶುದ್ಧ ಸರೋವರಕ್ಕೆ ಮಲಿನಗೊಂಡ ಕಲ್ಲು ಎಸೆಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರಿ. ಹನಿಟ್ರ್ಯಾಪ್ ಕುರಿತಾದ ಹೇಳಿಕೆ ನಿಮ್ಮ ಮಲಿನಗೊಂಡ ಮನಃಸ್ಥಿತಿ, ಹರಕು ನಾಲಿಗೆಯ ವ್ಯಕ್ತಿತ್ವವನ್ನು ಪರಿಚಯಿಸಿದೆ. ಅಧಿಕಾರ ಬಲದಿಂದ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ನೀವು, ಕೀಳು ಅಭಿರುಚಿ ಹೇಳಿಕೆಗಳನ್ನು ನೀಡಿ ನಿಮ್ಮ ಹೈಕಮಾಂಡ್ ಅಂಗಳವನ್ನು ವಿಕೃತ ಖುಷಿಪಡಿಸಲು ಹೊರಟಿದ್ದೀರಿ ಎಂಬುದು ಬಹಿರಂಗ ಸತ್ಯ” ಎಂದು ಕಿಡಿಕಾರಿದ್ದಾರೆ.